ಸೋಮವಾರಪೇಟೆ, ಮೇ 3: ಚುನಾವಣೆ ಸಂದರ್ಭ ಮಾತ್ರ ಹೊರಬರುವ ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರು ಶಾಸಕ ಅಪ್ಪಚ್ಚು ರಂಜನ್ ಬಗ್ಗೆ ಅಪಪ್ರಚಾರ ಮಾಡುವದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ರಂಜನ್ ಅವರ ಅವಧಿಯಲ್ಲಿ ಸೋಮವಾರಪೇಟೆ ಅಭಿವೃದ್ಧಿ ಆಗಿದೆಯೇ ಹೊರತು ಜೀವಿಜಯರವರು ಶಾಸಕ, ಸಚಿವರಾಗಿದ್ದಾಗ ಆಗಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಚಿ ಸಚಿವ ಜೀವಿಜಯ ಅವರು ಆಗಾಗ್ಗೆ ಶಾಸಕ ಅಪ್ಪಚ್ಚು ರಂಜನ್ರವರು ಕಳೆದ 20 ವರ್ಷಗಳಿಂದ ಶಾಸಕರಾಗಿದ್ದರೂ ಸೋಮವಾರಪೇಟೆ ಏನೂ ಅಭಿವೃದ್ಧಿ ಕಂಡಿಲ್ಲ ಎಂದು ಆರೋಪಿಸು ತ್ತಿರುವದರಲ್ಲಿ ಹುರುಳಿಲ್ಲ. ಕಳೆದೆರಡು ದಶಕಗಳ ಹಿಂದೆ ಕುಗ್ರಾಮವಾಗಿದ್ದ ಸೋಮವಾರಪೇಟೆ ತಾಲೂಕು ಬಿಜೆಪಿಯ ಅಪ್ಪಚ್ಚು ರಂಜನ್ ಶಾಸಕರಾದ ನಂತರ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಇಂದಿಗೂ ಗ್ರಾಮೀಣ ಪ್ರದೇಶಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿ ಕಾಂಕ್ರಿಟ್ ರಸ್ತೆಯ ಮೇಲೆಯೆ ನಿಂತು ಮತಯಾಚನೆ ಮಾಡುತ್ತಿರುವ ಜೀವಿಜಯರವರಿಗೆ ಕಾಂಕ್ರಿಟ್ ರಸ್ತೆ ಮಾಡಿಸಿದ್ದು ಯಾರೆಂದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕಾಂಕ್ರಿಟ್ ರಸ್ತೆಗಳು ಬಿಜೆಪಿ ಕೊಡುಗೆ ಎಂದರು.
ಪಟ್ಟಣದ ಸಂತೆ ಮಾರುಕಟ್ಟೆಯನ್ನು ಪ್ಲಾಸ್ಟಿಕ್ ಹೊದಿಕೆಗಳಿಂದ ಮುಕ್ತಿ ಕೊಡಿಸಿ ಹೈಟೆಕ್ ಮಾರುಕಟ್ಟೆಯಾಗಿ ನಿರ್ಮಿಸುವ ಯೋಜನೆ ರೂಪಿಸಿ, ಯಶಸ್ಸು ಕಂಡಿದ್ದು ಅಪ್ಪಚ್ಚು ರಂಜನ್. ಆದರೆ ಅಧಿಕಾರದಲ್ಲೇ ಇರದ, ಹೈಟೆಕ್ ಮಾರುಕಟ್ಟೆ ನಿರ್ಮಾಣದ ಪರಿಕಲ್ಪನೆಯೇ ಇಲ್ಲದ ಜೀವಿಜಯ ಅವರು ಇದು ತನ್ನ ಕೊಡುಗೆ ಎಂದು ಹೇಳಿಕೊಳ್ಳುತ್ತಿರುವದು ಹಾಸ್ಯಾಸ್ಪದ ಎಂದರು.
ಪಟ್ಟಣದ ಜಿಎಂಪಿ ಶಾಲೆಯ ಶತಮಾನೋತ್ಸವ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಇರುವದಕ್ಕೆ ಇಲ್ಲಿನ ಶಾಸಕರೇ ಕಾರಣ ಎಂದು ದೂರುತ್ತಿರುವ ಜೀವಿಜಯ ಅವರೇ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಭವನ ನಿರ್ಮಾಣದ ಬಗ್ಗೆ ಸರಿಯಾದ ಅಂದಾಜು ಪಟ್ಟಿ ತಯಾರಿಸದೇ,ಪೂರ್ವ ಯೋಜನೆಯಿಲ್ಲದೇ ಕಾಮಗಾರಿ ಪ್ರಾರಂಭಿಸಿದರು ಎಂದು ಅಭಿಮನ್ಯುಕುಮಾರ್ ಬೊಟ್ಟು ಮಾಡಿದರು.
ತಾನು ತಾ.ಪಂ. ಉಪಾಧ್ಯಕ್ಷನಾದ ನಂತರ ಶಾಸಕರೊಂದಿಗೆ ಚರ್ಚಿಸಿ, ನಂತರದಲ್ಲಿ ತಾಲೂಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು, ಭವನ ನಿರ್ಮಾಣ ಸಮಿತಿ ಪದಾಧಿಕಾರಿಗಳು ಸೇರಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಸಭೆಗೆ ಬರುವಂತೆ ಸಮಿತಿ ಗೌರವಾಧ್ಯಕ್ಷರಾಗಿದ್ದ ಜೀವಿಜಯರವರಿಗೆ ಆಹ್ವಾನಿಸಲಾಗಿತ್ತು. ಆದರೆ ಅವರೇ ಸಭೆಗೆ ಬಾರದೆ, ರಾಜಕೀಯ ದ್ವೇಷದಿಂದ ದೂರ ಉಳಿದಿದ್ದರು. ಶಿಕ್ಷಕರ ಸಂಘದವರು ಮನೆಗೆ ತೆರಳಿ ಕರೆದರೂ ಬಾರದ ಜೀವಿಜಯ ಅವರು ಇದೀಗ ಚುನಾವಣೆಯಲ್ಲಿ ವೃಥಾ ಆರೋಪ ಮಾಡುತ್ತಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್. ಮೂರ್ತಿ ಮಾತನಾಡಿ, ತಾನು ಸುಮಾರು 30 ವರ್ಷಗಳ ಕಾಲ ಪಟ್ಟಣ ಪಂಚಾಯಿತಿ ಸದಸ್ಯನಾಗಿ, ಕೊನೆ ಅವಧಿಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಕಳೆದ 2 ದಶಕಗಳಿಂದೀಚೆ ಪಟ್ಟಣ ಅಭಿವೃದ್ಧಿ ಕಂಡಷ್ಟು ಮೊದಲು ಕಂಡಿರಲಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಶಾಸಕ ಅಪ್ಪಚ್ಚು ರಂಜನ್ರವರೇ ಪ್ರಮುಖ ಕಾರಣ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಥಳೀಯ ಶಾಸಕರಾಗಿದ್ದ ಅಪ್ಪಚ್ಚು ರಂಜನ್ರವರ ವಿಶೇಷ ಪ್ರಯತ್ನದಿಂದ ರೂ. 5 ಕೋಟಿ ಅನುದಾನ ಬಂದಿತ್ತು. ಜಗದೀಶ್ ಶೆಟ್ಟರ್ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೂ. 2.5 ಕೋಟಿ ಅನುದಾನವನ್ನು ತಂದು ಪಟ್ಟಣದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದರು.
ಈ ಅನುದಾನದೊಂದಿಗೆ ಪ.ಪಂ.ನ ಅಲ್ಪ ಅನುದಾನ ಕ್ರೋಢೀಕರಿಸಿ ಬಸ್ ನಿಲ್ದಾಣಗಳಲ್ಲಿ ಪುಷ್ಪಗಿರಿ, ಕಾವೇರಿ ವಾಣಿಜ್ಯ ಮಳಿಗೆಗಳು, ಕ್ಲಬ್ ರಸ್ತೆಯ ವಾಣಿಜ್ಯ ಮಳಿಗೆಗಳು, ಸಿ.ಕೆ. ಸುಬ್ಬಯ್ಯ ರಸ್ತೆಯ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಬಸ್ ನಿಲ್ದಾಣ, ಕ್ಲಬ್ ರಸ್ತೆ, ಜೇಸಿ ವೇದಿಕೆ ರಸ್ತೆಗಳ ಕಾಂಕ್ರಿಟೀಕರಣ, ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಬಡಾವಣೆಗೆ ನೀರು, ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಪಟ್ಟಣದ ಬಹುತೇಕ ಚರಂಡಿಗಳ ಕಾಂಕ್ರಿಟ್ ಕಾಮಗಾರಿಗಳನ್ನು ಮಾಡಲಾಗಿದೆ. ಶಾಸಕರ ವಿಶೇಶಾಸಕ್ತಿಯಿಂದ ಪಟ್ಟಣದಲ್ಲಿ 2 ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಇದು ಜೆಡಿಎಸ್ನವರಿಗೆ ಕಾಣದಿರುವದು ದುರಂತ ಎಂದರು.
ಸೋಮವಾರಪೇಟೆಗೆ ಹಾರಂಗಿ ಆಣೆಕಟ್ಟೆಯಿಂದ ಕುಡಿಯುವ ನೀರು ಸಂಪರ್ಕ ತನ್ನ ಕೊಡುಗೆ ಎಂದು ಜೀವಿಜಯನವರು ಹೇಳಿಕೊಳ್ಳುತ್ತಿರುವದು ಹಾಸ್ಯಾಸ್ಪದ. ಪ.ಪಂ.ನಿಂದಲೇ ರೂ. 60 ಸಾವಿರ ವ್ಯಯಿಸಿ ಯೋಜನೆಯ ಬಗ್ಗೆ ಸರ್ವೆ ಮಾಡಿಸಲಾಗಿತ್ತು. ಆ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಶಾಸಕ ಅಪ್ಪಚ್ಚು ರಂಜನ್ರವರ ಕೊಡುಗೆ ಇದೆಯೇ ಹೊರತು ಜೀವಿಜಯ ಅವರ ಪಾತ್ರವೇ ಇಲ್ಲ. ಆದರೂ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಕಿಬ್ಬೆಟ್ಟ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ, ಶಿಕ್ಷಕ ಪ್ರಕೋಷ್ಠದ ಜೆ.ಸಿ. ಶೇಖರ್ ಉಪಸ್ಥಿತರಿದ್ದರು.