ಗೋಣಿಕೊಪ್ಪಲು, ಮೇ 3: ಕಾಂಗ್ರೆಸ್‍ನ ಪ್ರಮುಖರಾಗಿ ಪಕ್ಷದಲ್ಲಿ ದುಡಿದಿದ್ದ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್‍ರವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಪದ್ಮಿನಿ ಪೊನ್ನಪ್ಪ ನಂತರ ಬೆಂಗಳೂರಿನ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೆಗೌಡರ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಕಳೆದ 33 ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿದ್ದ ಮಾಂಗೇರ ಪದ್ಮಿನಿ ಪೊನ್ನಪ್ಪ ಈ ಬಾರಿ ಕಾಂಗ್ರೆಸ್‍ನಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ಅಂತಿಮಗೊಳ್ಳದ ಹಿನ್ನೆಲೆ ಕಾಂಗ್ರೆಸ್‍ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಬೆಳವಣಿಗೆಯಲ್ಲಿ ನಾಮಪತ್ರವನ್ನು ಹಿಂಪಡೆದರೂ ಇದೀಗ ಪದ್ಮಿನಿ ಪೊನ್ನಪ್ಪ ಜೆಡಿಎಸ್ ಪಕ್ಷ ಆಯ್ಕೆ ಮಾಡಿಕೊಂಡು ಸೇರ್ಪಡೆಗೊಂಡಿದ್ದಾರೆ.

ಪದ್ಮಿನಿ ಪೊನ್ನಪ್ಪ ಅವರನ್ನು ಜೆಡಿಎಸ್‍ನ ಜಿಲ್ಲಾಧ್ಯಕ್ಷ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದರು. ಕೆ.ಪಿ.ಸಿ.ಸಿ. ವಿಶೇಷ ಆಹ್ವಾನಿತರಾಗಿ, ಕಾರ್ಯದರ್ಶಿಯಾಗಿ ಕೆಪಿಸಿಸಿ ಕಚೇರಿ ನಿರ್ವಾಹಕಿಯಾಗಿ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ ಪದ್ಮಿನಿ ಪೊನ್ನಪ್ಪ ತಿತಿಮತಿ ಭದ್ರಗೊಳದ ತಾರಿಕಟ್ಟೆ ನಿವಾಸಿಯಾಗಿದ್ದು ದೇವರಪುರ ಪಂಚಾಯ್ತಿಯ ಪ್ರಧಾನರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸುದೀರ್ಘ 3 ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿಯುತ ಮಹಿಳೆಯಾಗಿ ದುಡಿದಿದ್ದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದೆ. ರಾಜ್ಯ ವರಿಷ್ಠರಿಂದ ಈ ಬಗ್ಗೆ ಹಸಿರು ನಿಶಾನೆಯು ದೊರೆತಿತ್ತು. ಕೊನೆಗಳಿಗೆಯಲ್ಲಿ ಟಿಕೆಟ್ ವಂಚನೆಯಾಯಿತು. ನಾಮಪತ್ರವನ್ನು ಹಿರಿಯರ ಸೂಚನೆ ಮೇರೆ ವಾಪಾಸ್ಸು ಪಡೆದಿದ್ದೆ. ಪಕ್ಷದ ವರಿಷ್ಠರು ಸೌಜನ್ಯಕ್ಕಾದರೂ ನನ್ನೊಂದಿಗೆ ಮಾತನಾಡಲಿಲ್ಲ. ಆದ್ದರಿಂದ ಬೇಸತ್ತು. ಜಾತ್ಯತೀತ ನಿಲುವಿಗೆ ಬದ್ದಳಾಗಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ. ಪಕ್ಷವೂ ರಾಜ್ಯದಲ್ಲಿ ಉತ್ತಮ ಜವಾಬ್ದಾರಿ ಹುದ್ದೆಯನ್ನು ನೀಡಿದೆ ಎಂದು ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದ್ದಾರೆ.

ಜಾತ್ಯತೀತ ನೆಲೆಗಟ್ಟಿನಲ್ಲಿ ನಂಬಿಕೆ ಇರುವ ಪದ್ಮಿನಿ ಪೊನ್ನಪ್ಪ ಪಕ್ಷಕ್ಕೆ ಆಗಮಿಸಿರುವದು ಸ್ವಾಗತ. ಪಕ್ಷ ಇವರನ್ನು ಸದ್ಬಳಕೆ ಮಾಡಿಕೊಳ್ಳಲಿದೆ. ರಾಷ್ಟ್ರೀಯ ಪಕ್ಷದಲ್ಲಿ ದುಡಿದ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂಬದು ದೃಢಪಟ್ಟಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದ್ದಾರೆ.