ಮಡಿಕೇರಿ, ಮೇ 3: ಕರಿಮೆಣಸು ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಕೆ.ಎಂ. ತಿಮ್ಮಯ್ಯ ಅವರು ತೋಟದ ಗೋದಾಮಿನಿಂದ 2016ರಲ್ಲಿ ಆರೋಪಿಗಳಾದ ನಾಲಡಿ ಕಕ್ಕಬೆಯ ಅಶೋಕ, ಕೆ.ಸಿ. ಅರುಣ್ ಹಾಗೂ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮನೋಜ್ ಇವರುಗಳು ಒಂದು ಲಕ್ಷ ರೂ. ಬೆಲೆ ಬಾಳುವ ಕರಿಮೆಣಸು, 36 ಸಾವಿರ ರೂ. ಬೆಲೆ ಬಾಳುವ ಕಾಫಿಯನ್ನು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.ಕಾಫಿ ಕರಿಮೆಣಸು ಕಳವು ಆರೋಪಿಗಳಿಗೆ ಶಿಕ್ಷೆ(ಮೊದಲ ಪುಟದಿಂದ) ಈ ಪ್ರಕರಣದ ವಿಚಾರಣೆ ನಡೆಸಿದ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯ 1ನೇ ಆರೋಪಿ ಅಶೋಕ ಕೆ.ಸಿ. ತಲೆ ಮರೆಸಿಕೊಂಡಿರುವ ಕಾರಣ 2 ಮತ್ತು 3ನೇ ಆರೋಪಿತರ ವಿರುದ್ಧ ವಿಚಾರಣೆ ನಡೆಸಿ ತೀರ್ಪು ನೀಡಿದ್ದು, ಅದರಂತೆ ಅರುಣ್ ಕೆ.ಸಿ. ಹಾಗೂ ಮನೋಜ್ ಎಸ್. ಇವರುಗಳಿಗೆ ನ್ಯಾಯಾಧೀಶರಾದ ಶರ್ಮಿಳಾ ಕಾಮತ್ ಕೆ. ಅವರು ಕಾಫಿ ಹಾಗೂ ಕರಿಮೆಣಸನ್ನು ಕಳವು ಮಾಡಿದ ಅಪರಾಧಕ್ಕೆ 1 ವರ್ಷ 5 ತಿಂಗಳು ಸಾದಾ ಸಜೆ ಮತ್ತು ತಲಾ 2000 ರೂಪಾಯಿ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಪುನಃ 15 ದಿನಗಳ ಕಾರಾಗೃಹ ವಾಸ ಅನುಭವಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ವಾದಿಸಿದರು.