ಸೋಮವಾರಪೇಟೆ, ಮೇ 3: ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ತರಹೇವಾರಿ ಮಾತುಗಳು ಹೊರಬರುತ್ತಿವೆ. ಇದರೊಂದಿಗೆ ಅಭ್ಯರ್ಥಿಗಳ ಬೆಂಬಲಿಗರೂ ತಮ್ಮ ಮಾತುಗಳನ್ನು ಹರಿತಗೊಳಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳಿಗೆ ಬರವಿಲ್ಲ ಎಂಬಂತಾಗಿದೆ.
ಇಂದು ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಪಕ್ಷಗಳ ಪ್ರಚಾರ ಸಭೆಯಲ್ಲಿ ಆರೋಪ-ಪ್ರತ್ಯಾರೋಪಗಳೊಂದಿಗೆ ಅಭ್ಯರ್ಥಿಗಳ ವಯಸ್ಸಿನ ಬಗ್ಗೆಯೂ ಗೌಪ್ಯತೆ ಹೊರಬಿದ್ದಿದೆ. ಮೊದಲು ನಡೆದ ಜೆಡಿಎಸ್ ಸಭೆಯಲ್ಲಿ ಭಾಗಿಯಾಗಿದ್ದ ಮಹಮ್ಮದ್ ರಫೀಕ್ ಮಾತನಾಡುತ್ತಾ, ಬಿಜೆಪಿಯವರು ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರಿಗೆ ವಯಸ್ಸಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳಿಗೂ ವಯಸ್ಸಾಗಿದೆ. ಆದರೆ ಅವರ ಸಾಮಾಜಿಕ ಕಾರ್ಯ ನಿಂತಿಲ್ಲ. ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದರು.
ಇಷ್ಟಕ್ಕೆ ಸುಮ್ಮನಾಗದ ಅವರು, ಜೀವಿಜಯ ಅವರು ಒಂದು ಫೋನ್ ಕಾಲ್‍ನಲ್ಲೇ ಕೆಲಸ ಮಾಡಿಸುತ್ತಾರೆ. ಏರೋಪ್ಲೇನ್‍ನಲ್ಲಿ ಓಡಾಡೋಕೆ ಆಗದೇ ಇದ್ರೂ ಕುಳಿತಲ್ಲೇ ಫೋನ್ ಮೂಲಕ ಕೆಲಸ ಮಾಡಿಸ್ತಾರೆ ಎಂದು ಬಹಿರಂಗ ಸಭೆಯಲ್ಲಿ ವಯಸ್ಸನ್ನು ಎಳೆದರು.
ನಂತರ ಮಾತಿಗೆ ನಿಂತ ಜೀವಿಜಯ ಅವರು, ‘ನನಗೆ 78 ವರ್ಷ ವಯಸ್ಸಾಗಿದೆ. ಬಿಜೆಪಿ ಅಭ್ಯರ್ಥಿಗೆ 65 ವರ್ಷ ಆಗಿರಬಹುದು, ಕಾಂಗ್ರೆಸ್‍ನ ಚಂದ್ರಕಲಾ ಅವರಿಗೆ 66 ವರ್ಷ ಆಗಿರಬಹುದು. ವಯಸ್ಸು ಪರಿಗಣಿಸದೇ ಪಕ್ಷದ ವರಿಷ್ಠರೇ ನನಗೆ ಟಿಕೇಟ್ ಕೊಟ್ಟಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆಯೇ ಹೊರತು ಹುಡುಗಿ ಕೇಳೋಕೆ ಹೋಗ್ತಿಲ್ಲ’ ಎಂದು ವಯಸ್ಸನ್ನು ಅಳೆದರು.
ಜೆಡಿಎಸ್ ಸಭೆ ಮುಕ್ತಾಯಗೊಂಡ ನಂತರ ಆರಂಭವಾದ ಬಿಜೆಪಿ ಬಹಿರಂಗ ಸಭೆಯಲ್ಲೂ ಅಭ್ಯರ್ಥಿಗಳ ವಯಸ್ಸಿನ ಚರ್ಚೆ ನಡೆಯಿತು. ಪಕ್ಷದ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡುತ್ತಾ, ಮಡಿಕೇರಿ ಕ್ಷೇತ್ರ 174 ಕಿ.ಮೀ. ವ್ಯಾಪ್ತಿ ಹೊಂದಿದೆ. ಕ್ಷೇತ್ರದಾದ್ಯಂತ ಓಡಾಡೋ ಸಾಮಥ್ರ್ಯ ಇರೋದು ಅಪ್ಪಚ್ಚು ರಂಜನ್‍ಗೆ ಮಾತ್ರ. ಎಲ್ಲಾ ಭಾಗಕ್ಕೆ ತೆರಳಲು ಆರೋಗ್ಯ ಅಷ್ಟೇ ಮುಖ್ಯ ಎಂದರು. ಜೆಡಿಎಸ್ ಅಭ್ಯರ್ಥಿ ಕಳೆದ ಎರಡು ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡಿದ್ದರು. ಆದರೆ ಈಗಲೂ ಸ್ಪರ್ಧೆಯಲ್ಲಿದ್ದಾರೆ. ಜೀವಿಜಯ ಅವರು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಬಾರದು ಎಂದರು.
ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್, ಜೀವಿಜಯ ಅವರು ತನ್ನ ವಯಸ್ಸನ್ನು ಏರಿಸಿ ಮಾತನಾಡಿದ್ದಾರೆ. ನನಗೆ ಈಗ 61 ವರ್ಷ ವಯಸ್ಸಾಗಿದೆ. ಸಾಕ್ಷಿ ಬೇಕಿದ್ದರೆ ದೇವಣಗೇರಿ ಶಾಲೆಯ ದಾಖಲಾತಿ ತೆಗೆಸಲಿ. ಅವರದು ಬೇಕಿದ್ದರೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ ದಾಖಲಾತಿ ನೋಡಲಿ, 1934ರ ಇಸವಿಯಲ್ಲಿ ಯಾರು ಹುಟ್ಟಿದ್ದು, ಯಾರಿಗೆ ಎಷ್ಟು ವಯಸ್ಸಾಯ್ತು ಅಂತ ಗೊತ್ತಾಗುತ್ತೆ ಎಂದರು.