ಕುಶಾಲನಗರ, ಮೇ 3: ಜಲಮೂಲ ಅಥವಾ ನದಿ ತೊರೆಗಳಿಗೆ ಯಾವದೇ ರೀತಿಯ ಧಾರ್ಮಿಕ ತ್ಯಾಜ್ಯಗಳನ್ನು ಹಾಕುವ ಮೂಲಕ ನದಿ ನೀರನ್ನು ಕಲುಷಿತಗೊಳಿಸಬಾರದು ಎಂದು ಅರ್ಚಕ ಕೃಷ್ಣಮೂರ್ತಿ ಭಟ್ ಕರೆ ನೀಡಿದ್ದಾರೆ. ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರದಲ್ಲಿ ಕಾವೇರಿ ನದಿಗೆ ಹಮ್ಮಿಕೊಂಡ 79ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ಮೂಢನಂಬಿಕೆ ಹೆಸರಿನಲ್ಲಿ ಜಲಮೂಲಗಳ ಮೇಲಿನ ಅನಾಚಾರ ಹೆಚ್ಚಾಗುತ್ತಿದೆ. ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ನದಿ ಕಾವಲುಪಡೆಯ ಸಂಚಾಲಕ ಕೆ.ಎನ್. ದೇವರಾಜ್, ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಕಾರ್ಯಕ್ರಮಗಳ ಮೂಲಕ ಜನತೆಗೆ ಈ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ಸಾಗುತ್ತಿದ್ದು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.

ಮಹಾ ಆರತಿ ಅಂಗವಾಗಿ ಅಷ್ಟೋತ್ತರ, ಪೂಜಾ ವಿಧಿವಿಧಾನಗಳ ನಂತರ ನದಿಗೆ ಆರತಿ ಬೆಳಗಲಾಯಿತು. ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದ ಮತ್ತಿತರರು ಇದ್ದರು. ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು. ವಾರದ ಸ್ವಚ್ಛತೆ ಅಂಗವಾಗಿ ಸ್ಥಳೀಯ ನದಿ ಕಾವಲುಪಡೆಯ ಪ್ರಮುಖರಾದ ಕೆ.ಎನ್. ದೇವರಾಜ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ನದಿ ಸಂರಕ್ಷಣೆ ಬಗ್ಗೆ ಕರಪತ್ರಗಳನ್ನು ಹಂಚುವ ಮೂಲಕ ಜನರಿಗೆ ಅರಿವು ಜಾಗೃತಿ ಮೂಡಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಟಿ.ಜಿ. ಪ್ರೇಮ್ ಕುಮಾರ್, ಕೆ.ಸಿ. ನಂಜುಂಡಸ್ವಾಮಿ, ಕಮಲಾ ಗಣಪತಿ, ಸಿದ್ದರಾಜು ಮತ್ತು ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.