ಕುಶಾಲನಗರ, ಮೇ 3: ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಆಶ್ರಯದಲ್ಲಿ ಹೋಬಳಿ ಹಾಗೂ ನಗರ ಪದಾಧಿಕಾರಿಗಳ ಆಯ್ಕೆ ಸಭೆ ಕುಶಾಲನಗರದಲ್ಲಿ ನಡೆಯಿತು. ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬಡತನ ರೇಖೆಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತಗಳು ಮೂಲಭೂತ ಸೌಕರ್ಯಗಳನ್ನು ನೀಡಬೇಕಾಗಿದೆ ಎಂದರು. ಸರಕಾರದ ಸವಲತ್ತುಗಳನ್ನು ಪಡೆಯುವ ಮೂಲಕ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕಾಗಿದೆ ಎಂದರು. ಈ ಸಂದರ್ಭ ಅತಿಥಿಗಳಾಗಿ ಪಾಲ್ಗೊಂಡ ಪತ್ರಕರ್ತ ಟಿ.ಆರ್. ಪ್ರಭುದೇವ್, ಉದ್ಯಮಿ ವಿ.ಡಿ. ಪುಂಡರೀಕಾಕ್ಷ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಲೀನಾ ಡಿಕುನ್ನಾ ಅವರುಗಳು ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್. ಜಗದೀಶ್, ಒಕ್ಕೂಟದ ಕೊಡಗು ಜಿಲ್ಲಾ ಉಸ್ತುವಾರಿ ಕೆ. ರವಿ, ಒಕ್ಕೂಟದ ಮಾಧ್ಯಮ ಸಲಹೆಗಾರರಾದ ಕೆ.ಟಿ. ಶ್ರೀನಿವಾಸ್, ಉಪಾಧ್ಯಕ್ಷ ದಿನೇಶ್, ಖಜಾಂಚಿ ಸೋಮಣ್ಣ ಇದ್ದರು.