ಸೋಮವಾರಪೇಟೆ, ಮೇ 3: ಇಂದು ಸಂಜೆ ವೇಳೆಗೆ ಸೋಮವಾರಪೇಟೆ ವಿಭಾಗಕ್ಕೆ ಧಾರಾಕಾರ ಮಳೆಯೊಂದಿಗೆ ಭಾರೀ ಪ್ರಮಾಣದ ಗಾಳಿ ಬೀಸಿದ್ದರಿಂದ ಎರಡು ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಗೀಡಾಗಿದ್ದರೆ, ವಿದ್ಯುತ್ ಶಾಕ್‍ನಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ಅಸ್ವಸ್ಥರಾದ ಘಟನೆ ನಡೆದಿದೆ.ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕೊಪ್ಪ ಬಸವನಹಳ್ಳಿ ಗ್ರಾಮದ ಸತೀಶ್ ನಂಜಪ್ಪ ಅವರ ಮನೆಯ ಮೇಲೆ ಭಾರೀ ಗಾತ್ರದ ತೆಂಗಿನ ಮರ ಬಿದ್ದು ಮನೆಯ ಛಾವಣಿ ಮುರಿದು ಬಿದ್ದಿದೆ. ಮನೆಯೊಳಗೆ ಎಲ್ಲರೂ ಇದ್ದ ಸಂದರ್ಭವೇ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವದೇ ಹೆಚ್ಚಿನ ಹಾನಿ ಸಂಭವಿಸಿಲ್ಲ.ಇದರೊಂದಿಗೆ ಬೇಳೂರು ಗ್ರಾಮದ ಶೇಖರ್ ರಾಮ್ ನಾಯರ್ ಅವರ ಮನೆಯ ಮೇಲೆ ಮಾವಿನ ಮರ ಬಿದ್ದು, ಛಾವಣಿ ಜಖಂಗೊಂಡಿದ್ದು, ಸಿಮೆಂಟ್ ಶೀಟ್, ಹೆಂಚು-ಮರದ ಕೌಕೋಲು ಸೇರಿದಂತೆ ಮನೆಯೊಳಗಿನ ಇನ್ನಿತರ ಪರಿಕರಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಬೇಳೂರು ಗ್ರಾ.ಪಂ. ಸದಸ್ಯ ಹರೀಶ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಜೆ ವೇಳೆಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿದ ಪರಿಣಾಮ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯ ಕಂಪ್ಯೂಟರ್ ವಿದ್ಯುತ್ ಶಾಕ್‍ಗೆ ಒಳಗಾಗಿದ್ದು, ಕಂಪ್ಯೂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಎಂಬವರು ಆಘಾತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದಾರೆ.

ತಕ್ಷಣ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ರೆಹಮತ್ ಅವರ ಕುತ್ತಿಗೆ ಭಾಗಕ್ಕೆ ನೋವುಂಟಾಗಿದೆ.

ಭಾರೀ ಗಾಳಿಗೆ ಸೋಮವಾರಪೇಟೆ-ಕೋವರ್‍ಕೊಲ್ಲಿ-ಐಗೂರು ರಸ್ತೆಯಲ್ಲಿ ಮರದ ಕೊಂಬೆಗಳು ರಸ್ತೆಗೆ ಬಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು.