ಮಡಿಕೇರಿ, ಮೇ 3: ಪ್ರಸಕ್ತ ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 80 ರಷ್ಟು ಕನಿಷ್ಟ ಸಾಧನೆ ತೋರುವ ದಿಸೆಯಲ್ಲಿ ಮತದಾರರನ್ನು ಹುರಿದುಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮತದಾನ ಜಾಗೃತಿ ಪ್ರಭಾರಿ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.ಚುನಾವಣಾ ತಯಾರಿ ಕುರಿತು ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಇನ್ನು ಉಳಿದಿರುವ ಕೇವಲ ಒಂಬತ್ತು ದಿನಗಳಲ್ಲಿ ಜಿಲ್ಲೆಯ ಮತದಾರರು ಅತ್ಯುತ್ಸಾಹದಿಂದ ಮೇ 12 ರಂದು ಮತದಾನದಲ್ಲಿ ಪಾಲ್ಗೊಳ್ಳುವಂತೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿರುವದಾಗಿ ವಿವರಿಸಿದರು.ಈ ಸಂಬಂಧ ಕೊಡಗು ಜಿಲ್ಲಾ ಕೇಂದ್ರವೂ ಸೇರಿದಂತೆ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾ.ಪಂ.ಗಳ ಹಂತದಲ್ಲಿ ವ್ಯಾಪಾಕ ಪ್ರಚಾರದೊಂದಿಗೆ ಮತದಾರರಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ ಎಂದು ಮಿಶ್ರ ಮಾಹಿತಿ ನೀಡಿದರು.

ಅಲ್ಲಲ್ಲಿ ವಿಶೇಷ ವಾಗಿ ಗ್ರಾಮೀಣ ಜನತೆ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಮಹಿಳಾ ಮತದಾರರೊಂದಿಗೆ ಹಾಡಿಯ ಆದಿವಾಸಿಗಳಲ್ಲಿ ಮೇ 12 ರಂದು ಅಧಿಕ ಸಂಖ್ಯೆಯಲ್ಲಿ ನಿರ್ಭಯದಿಂದ ತಮ್ಮ ಅಮೂಲ್ಯ ಹಕ್ಕು ಚಲಾಯಿಸುವಂತೆ ಪ್ರೋತ್ಸಾಹ ನೀಡುತ್ತಿರುವದಾಗಿ ವಿವರಿಸಿದರು.

ಇನ್ನು ಬೀದಿ ನಾಟಕ, ‘ಸ್ಲೈಡ್ ಶೋ’ಗಳಿಂದಲೂ ಮತದಾನದ ಮಹತ್ವದ ಕುರಿತು ತಿಳಿಹೇಳಲಾಗುತ್ತಿದ್ದು, ಯಾರೊಬ್ಬರು ತಮ್ಮ ಅಮೂಲ್ಯ ಹಕ್ಕಿನಿಂದ ವಂಚಿತರಾಗದಂತೆ ಮತ್ತು ಯಾವದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವಂತೆ ಅರಿವು ಮೂಡಿಸಲಾಗುವದು ಎಂದು ಪ್ರಶಾಂತ್ ಕುಮಾರ್ ಮಿಶ್ರ ನೆನಪಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 73 ರಷ್ಟು ಮತದಾನ ನಡೆದಿದ್ದು, ಈ ಬಾರಿ ಶೇ. 80 ಕ್ಕಿಂತ ಹೆಚ್ಚಿನ ಸಾಧನೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಆ ಬಗ್ಗೆ ವಿಶ್ವಾಸ ವಿರಿಸಲಾಗಿದೆ ಎಂದು ಮಾರ್ನುಡಿದರು. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆ ನಿಟ್ಟಿನಲ್ಲಿ ಮತದಾರರಲ್ಲಿಯೂ ಸಹ ಮತ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ ಎಂಬ ಸಂದೇಶಗಳು ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಜಿಲ್ಲೆಯಾದ್ಯಾಂತ ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು. ಮತದಾನದಿಂದ ಯಾವದೇ ಕಾರಣಕ್ಕೂ ವಂಚಿತರಾಗಬೇಡಿ, ‘ಯಾವದೇ ರೀತಿಯ ಆಮಿಷಕ್ಕೆ ಮರುಳಾಗದಿರಿ-ವಿವೇಚನೆಯಿಂದ ಮತ ಚಲಾಯಿಸಿ, ಮತದಾನ ಮಾಡಿದವರೇ ಮಹಾಶೂರರು’ ಎಂಬ ಸಂದೇಶಗಳನ್ನು ಸಾರಲಾಗುತ್ತಿದೆ ಎಂದರು.

ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ಶೇಕಡವಾರು ಮತದಾನವಾಗಲು ಅರ್ಹರು ಮತ ಚಲಾಯಿಸುವಂತಾಗಬೇಕು. ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ಬಲ ಪಡಿಸಲು ತಪ್ಪದೆ ಮತ ಚಲಾಯಿಸಿ ಎಂಬ ಪ್ರಚಾರ ಮಾಡಲಾಗುತ್ತಿದೆ. ಯುವ ಮತದಾರರಲ್ಲಿ ಜಾಗೃತಿ, ಜಾಥಾ, ಮನೆ ಮನೆಗೆ ಭೇಟಿ ನೀಡಿ, ಸಹಿ ಸಂಗ್ರಹ, ವಿಕಲಚೇತನರಿಂದ ತ್ರಿಚಕ್ರ ವಾಹನದ ಮೂಲಕ ಬೈಕ್ ರ್ಯಾಲಿ, ರೇಡಿಯೋ ಕಾರ್ಯಕ್ರಮ, ಬಸ್ ನಿಲ್ದಾಣದಲ್ಲಿ ಮಾಹಿತಿ, ಇದರ ಜೊತೆಗೆ ಮತ್ತೊಂದು ಸೇರ್ಪಡೆ ಮತದಾನದ ಮಹತ್ವ ಕುರಿತ ಸಂದೇಶವುಳ್ಳ ಹಾಡಿನ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ನೀಡುವದು ಇದರ ಉದ್ದೇಶವಾಗಿದೆ ಎಂದರು.

ಜಿಲ್ಲೆಯ ಆಯ್ದ ಗ್ರಾಮ-ಪಟ್ಟಣಗಳಿಗೆ ತೆರಳಿ ಧ್ವನಿವರ್ಧಕದ ಮೂಲಕ ಮತದಾನದ ಮಹತ್ವವವನ್ನು ಸಾರಲಾಗುತ್ತದೆ. ಜಿಲ್ಲೆಯ ಚೆಟ್ಟಳ್ಳಿ, ಪೊನ್ನತ್‍ಮೊಟ್ಟೆ, ಅಭ್ಯತ್‍ಮಂಗಲ, ಒಂಟಿಯಂಗಡಿ, ನೆಲ್ಲಿಹುದಿಕೇರಿ, ಸಿದ್ದಾಪುರ, ವಾಲ್ನೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಬಸವನಹಳ್ಳಿ, ಕುಶಾಲನಗರ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ, ಬಾಣವಾರ, ಆಲೂರು-ಸಿದ್ದಾಪುರ, ಶನಿವಾರಸಂತೆ, ಕೊಡ್ಲಿಪೇಟೆ, ಬೆಸೂರು, ಗೌಡಳ್ಳಿ, ದೊಡ್ಡಮಳ್ತೆ, ಸೋಮವಾರಪೇಟೆ, ಬಜೆಗುಂಡಿ, ಐಗೂರು, ಚೌಡ್ಲು, ಮಾದಾಪುರ, ಮಕ್ಕಂದೂರು, ಮಡಿಕೇರಿ, ಗಾಳಿಬೀಡು, ಮದೆನಾಡು, ಕ್ಲೋಸ್‍ಬರ್ನ್, ಕತ್ತಲೆಕಾಡು, ಮರಗೋಡು, ಹಾಕತ್ತೂರು, ಮೇಕೇರಿ, ಬೆಟ್ಟಗೇರಿ, ಚೇರಾಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ಅಯ್ಯಂಗೇರಿ, ಎಮ್ಮೆಮಾಡು, ನಾಪೋಕ್ಲು, ಹೊದ್ದೂರು, ಮೂರ್ನಾಡು, ಬೇತ್ರಿ, ಕಾಕೋಟುಪರಂಬು, ಕದನೂರು, ವೀರಾಜಪೇಟೆ, ಆರ್ಜಿ, ಬೇಟೋಳಿ, ಅಮ್ಮತ್ತಿ, ಮಾಲ್ದಾರೆ, ಗೋಣಿಕೊಪ್ಪ, ಪಾಲಿಬೆಟ್ಟ ಹೀಗೆ ನಾನಾ ಕಡೆಗಳಲ್ಲಿ ಸಂಚಾರಿ ವಸ್ತು ಪ್ರದರ್ಶನ ವಾಹನ ತೆರಳಿದೆ ಎಂದರಲ್ಲದೆ ಈ ಬಾರಿ ಪ್ರಥಮ ಬಾರಿಗೆ ಚುನಾವಣಾ ಆಯೋಗ ಪರಿಚಯಿಸಿರುವ ವಿವಿಪ್ಯಾಟ್ ಬಗ್ಗೆ ಅರಿವು ಕಾರ್ಯಕ್ರಮಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುತ್ತಿವೆ. ವಿವಿಪ್ಯಾಟ್ ಬಗ್ಗೆ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ತರಬೇತಿದಾರರು ಮಾಹಿತಿ ನೀಡುತ್ತಿದ್ದರು.