ವೀರಾಜಪೇಟೆ, ಮೇ 3: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಚುನಾವಣಾ ಪ್ರಚಾರಕ್ಕಾಗಿ ಎರಡು ಕಚೇರಿಗಳು ಆರಂಭಗೊಂಡು ಕಾರ್ಯಕರ್ತರುಗಳ ನಡುವೆ ಗೊಂದಲದ ವಾತಾವರಣ ಉಂಟಾಗಿದಕ್ಕೆ ಇಂದು ತೆರೆ ಬಿದ್ದಿತು. ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಒಮ್ಮತದಿಂದ ಅರುಣ್ ಮಾಚಯ್ಯ ಅವರ ಗೆಲುವಿಗೆ ಶ್ರಮಿಸುವಂತೆ ಪಕ್ಷದ ಮುಖಂಡರುಗಳು ಸೂಚಿಸಿದ ಮೇರೆಗೆ ಎರಡು ಕಚೇರಿಗಳ ಕಾರ್ಯಕರ್ತರುಗಳು ಇಂದು ಒಗ್ಗಟ್ಟಾಗಿ ಒಮ್ಮತದ ನಿರ್ಧಾರ ಕೈಗೊಂಡರು. ನಂತರ ಇಂದು ಅಪರಾಹ್ನ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ವೀರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಪಕ್ಷದ ಧ್ವಜ ಹಿಡಿದು ಮನೆ, ಮನೆ, ಅಂಗಡಿಗಳಿಗೆ ತೆರಳಿ ಮತಯಾಚಿಸಿದರು. ಕಾರ್ಯಕರ್ತರ ಮೆರವಣಿಗೆ ಹಾಗೂ ಮತಯಾಚನೆ ಮುಖ್ಯ ರಸ್ತೆ, ಖಾಸಗಿ ಬಸ್ಸು ನಿಲ್ದಾಣದ ಮಾರ್ಗವಾಗಿ ಗೋಣಿಕೊಪ್ಪ

(ಮೊದಲ ಪುಟದಿಂದ) ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸೇರಿ ಪಕ್ಷದ ಪ್ರಚಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಮುಕ್ತವಾಗಿ ಚರ್ಚಿಸಿದರು.

ದೊಡ್ಡಟ್ಟಿ ಪಕ್ಷದ ಕಚೇರಿಯ ಮುಂದೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ಸದಸ್ಯ ತೊರೇರ ಬಿದ್ದಪ್ಪ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವಿಸ್ತೀರ್ಣದಲ್ಲೂ ಅತಿ ದೊಡ್ಡ ಕ್ಷೇತ್ರವಾಗಿರುವದರಿಂದ ವೀರಾಜಪೇಟೆಗೆ ವಲಯ ಹಾಗೂ ಪಟ್ಟಣ ಎಂಬ ಎರಡು ಚುನಾವಣಾ ಕಚೇರಿಗಳು ಅವಶ್ಯವಿರುವದರಿಂದ ಈಚೆಗೆ ದೊಡ್ಡಟ್ಟಿ ಚೌಕಿಯಲ್ಲಿ ಮತ್ತೊಂದು ಕಚೇರಿಯನ್ನು ಆರಂಭಿಸಲಾಗಿತ್ತು. ಈ ಎರಡು ಕಚೇರಿಗಳ ಕಾರ್ಯಕರ್ತರುಗಳು ಇಂದು ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಮಾತಯಾಚಿಸಿ ಒಮ್ಮತವನ್ನು ಪ್ರದರ್ಶಿಸಿದ್ದಾರೆ. ಎರಡು ಕಚೇರಿಗಳ ಚುನಾವಣೆ ಪ್ರಚಾರಕ್ಕೆ ಕಾರ್ಯಕರ್ತರಲ್ಲಿ ಭಿನ್ನಮತವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಆರ್.ಕೆ.ಅಬ್ದುಲ್ ಸಲಾಂ ಮಾತನಾಡಿ ಕಾರ್ಯಕರ್ತರೆಲ್ಲರೂ ಒಮ್ಮತವಾಗಿ ಶ್ರಮಿಸಿ ಪಕ್ಷದ ಅಭ್ಯರ್ಥಿ ಅರುಣ್ ಮಾಚಯ್ಯ ಅವರನ್ನು ಗೆಲ್ಲಿಸೋಣ ಎಂದರು. ಮತಯಾಚನೆಯಲ್ಲಿ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಪಟ್ಟಡ ರಂಜಿ ಪೂಣಚ್ಚ, ಮಾಳೇಟಿರ ಬೆಲ್ಲು ಬೋಪಯ್ಯ, ಧರ್ಮಜ ಉತ್ತಪ್ಪ, ಜಿ.ಜಿ. ಮೋಹನ್, ಎಂ.ಎಲ್. ಸೈನುದ್ದೀನ್, ಕರುಣ್‍ಕಾಳಯ್ಯ, ಮಾಳೇಟಿರ ಪ್ರಶಾಂತ್, ಎಂ.ಕೆ. ಬೋಪಣ್ಣ, ಮರ್ವೀನ್ ಲೋಬೋ, ಡಿ.ಸಿ.ಧ್ರುವ, ಡಿ.ಪಿ.ರಾಜೇಶ್, ಮಹಮ್ಮದ್‍ರಾಫಿ ಎಂ.ಎಸ್. ಪೂವಯ್ಯ, ಸಿ.ಕೆ.ಪ್ರಥ್ವಿನಾಥ್, ಏಜಾಜ್ ಅಹಮ್ಮದ್, ಸ.ರ.ಚಂಗಪ್ಪ. ನರೇಂದ್ರ ಕಾಮತ್ ಬಿ.ಎನ್ ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು. ಮಹಿಳಾ ಘಟಕದ ಕಾವೇರಮ್ಮ, ಲೈಲಾ ಜೋಸೆಫ್, ಶೀಬಾ, ಗಾಯಿತ್ರಿ ನರಸಿಂಹ, ಮತ್ತಿತರರು ಭಾಗವಹಿಸಿದ್ದರು. ಪಕ್ಷದ ಅಭ್ಯರ್ಥಿ ಅರುಣ್ ಮಾಚಯ್ಯ ಅವರು ನಾಪೋಕ್ಲಿನಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರಿಂದ ಮೆರವಣಿಗೆ ಹಾಗೂ ಮತಯಾಚನೆಯಲ್ಲಿ ಪಾಲ್ಗೊಂಡಿರಲಿಲ್ಲ.