ಸೋಮವಾರಪೇಟೆ, ಮೇ 5: ಕಾಫಿ ಬೆಳೆಗಾರರ ಎಲ್ಲಾ ರೀತಿಯ ಸಂಪೂರ್ಣ ಸಾಲವನ್ನು ಒಂದು ಬಾರಿ ಯಾವದೇ ಷರತ್ತಿಲ್ಲದೇ ಬೇಷರತ್ತಾಗಿ ಮನ್ನಾ ಮಾಡುವದೂ ಸೇರಿದಂತೆ ಬೆಳೆಗಾರರ ಭೂ ದಾಖಲೆಗಳನ್ನು ಸಮರ್ಪಕಗೊಳಿಸಿ ಕೊಡುವ ಬಗ್ಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಇದುವರೆಗೆ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಬೆಳೆಗಾರರ ಹಿತವನ್ನು ಕಾಯುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.ಬೆಳೆಗಾರರ ಅಲ್ಪ ಸಾಲ ಮನ್ನಾ ಮಾಡಿದರೆ ಯಾವದೇ ಪ್ರಯೋಜನ ವಿಲ್ಲ. ಈ ಒಂದು ಬಾರಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡ ಬೇಕು. ಇದರೊಂದಿಗೆ ಬೆಳೆಗಾರರ ಭೂಮಿಯ ಜಿಪಿಎಸ್ ಸರ್ವೆ, ಆಕಾರಬಂಧಿ ದುರಸ್ತಿ, ಸ್ವಾಧೀನಾನು ಭವದ ಭೂಮಿಗೆ ದಾಖಲೆ ಪತ್ರ, ಆರ್‍ಟಿಸಿ ನೀಡಲು ಕ್ರಮ ಕೈಗೊಳ್ಳ ಬೇಕು ಎಂದರು. ಪ್ರಸ್ತುತ ಕಾಫಿ ಮತ್ತು ಕಾಳುಮೆಣಸಿನ ದರ ಕುಸಿತ ಗೊಳ್ಳುತ್ತಿದೆ. ತೋಟ ನಿರ್ವಹಣೆ ಕಷ್ಟಕರವಾಗಿದೆ. ಕಾರ್ಮಿಕರ ಕೂಲಿ ಸೇರಿದಂತೆ ಕೃಷಿ ಪರಿಕರ, ಗೊಬ್ಬರ, ಕೀಟ ನಾಶಕಗಳ ಬೆಲೆಯೂ ಏರಿಕೆಯಾಗಿದೆ. ಒಂದು ಏಕರೆ ಕೃಷಿ ಕೈಗೊಳ್ಳಲು ರೂ. 80 ಸಾವಿರ ಖರ್ಚು ತಗುಲಿದರೆ ಕೇವಲ ರೂ. 50 ಸಾವಿರ ಆದಾಯ ಲಭಿಸುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವದೇ ಸರ್ಕಾರ ಗಮನಹರಿಸಿಲ್ಲ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳು ತಿಂಗಳೊಳಗೆ ಬೆಳೆಗಾರರ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗೋಷ್ಠಿಯಲ್ಲಿದ್ದ ಸಂಘದ ನಿರ್ದೇಶಕ ಅನಂತ್‍ರಾಮ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಬೆಳೆಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಪೂವಮ್ಮ ಗುರಪ್ಪ, ವರಲಕ್ಷ್ಮೀ ಸಿದ್ದೇಶ್ವರ್, ಕುಶಾಲಪ್ಪ ಅವರುಗಳು ಉಪಸ್ಥಿತರಿದ್ದರು.