ಮಡಿಕೇರಿ, ಮೇ 5 : ವ್ಯಕ್ತಿಯೋರ್ವರು ದಿಢೀರನೆ ಪ್ರತ್ಯಕ್ಷ ಗೊಂಡ ಕಾಡಾನೆಯಿಂದ ತಪ್ಪಿಸಿ ಕೊಳ್ಳಲು ಓಡಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ಸುಂಟಿಕೊಪ್ಪ ಸಮೀಪ ಹೇರೂರಿನ ಮೋದೂರು ತೋಟದಲ್ಲಿ ಮೇಸ್ತ್ರಿಯಾಗಿರುವ ಗರಗಂದೂರು ನಿವಾಸಿ ಇಬ್ರಾಹಿಂ ಎಂಬವರು ಇಂದು ಬೆಳಿಗ್ಗೆ ಬೈಕ್‍ನಲ್ಲಿ ತೋಟಕ್ಕೆ ತೆರಳುತ್ತಿದ್ದ ವೇಳೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಗಾಬರಿಗೊಂಡ ಇಬ್ರಾಹಿಂ ಬೈಕ್ ಅನ್ನು ಬಿಟ್ಟು ಓಡಿದ್ದಾರೆ. ಈ ವೇಳೆ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ.ಅನತಿ ದೂರದವರೆಗೆ ಇಬ್ರಾಹಿಂ ಅವರನ್ನು ಬೆನ್ನಟ್ಟಿದ ಕಾಡಾನೆ ಬಳಿಕ ಹಿಂತಿರುಗಿ ಬಂದು ಬೈಕನ್ನು ಸಂಪೂರ್ಣ ಜಖಂಗೊಳಿಸಿದೆ. ಗಾಯಗೊಂಡ ಇಬ್ರಾಹಿಂ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಡಿಎಫ್‍ಓ ಮಂಜುನಾಥ್ ಅವರನ್ನು ತರಾಟೆ ತೆಗೆದುಕೊಂಡ ಕಾರ್ಮಿಕರು ಕೂಡಲೇ ಕಾಡಾನೆಯನ್ನು ಸೆರೆಹಿಡಿಯುವಂತೆ ಪಟ್ಟು ಹಿಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಮಂಜುನಾಥ್ ಅವರು ಅರವಳಿಕೆ ಮದ್ದಿನ ಕೊರತೆಯಿಂದಾಗಿ ಕಾಡಾನೆ ಸೆರೆಗೆ ಸಾಧ್ಯವಾಗುತ್ತಿಲ್ಲ. ಅರವಳಿಕೆ ಮದ್ದು ಲಭ್ಯವಾದ ಕೂಡಲೇ ಮಡಿಕೇರಿಯಲ್ಲಿ 3 ಹಾಗೂ ವೀರಾಜಪೇಟೆಯಲ್ಲಿ 3 ಕಾಡಾನೆಗಳನ್ನು ಸೆರೆ ಹಿಡಿಯಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದರು.