ಮಡಿಕೇರಿ, ಮೇ.5: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ 538 ಮತಗಟ್ಟೆಗಳಲ್ಲಿ ತಾ. 12 ರ ಮತದಾನದಂದು ಜನತೆ ನಿರ್ಭಯದಿಂದ ತಮ್ಮ ಹಕ್ಕು ಚಲಾಯಿಸುವಂತೆ ಕರೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಪೊಲೀಸ್ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಆಶ್ವಾಸನೆಯಿತ್ತರು.(ಮೊದಲ ಪುಟದಿಂದ) ಚುನಾವಣಾ ಭದ್ರತೆ ಸಂಬಂಧ ಪೊಲೀಸ್ ಅಧೀಕ್ಷಕರನ್ನು “ಶಕ್ತಿ” ಸಂಪರ್ಕಿಸಿದಾಗ ಭದ್ರತಾ ಕ್ರಮಗಳ ಕುರಿತು ನಿಗಾ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಕಳೆದ 2012 ರಿಂದಲೇ ಜಿಲ್ಲೆಯಲ್ಲಿ ಅಲ್ಲಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಪ್ರದೇಶಗಳ 12 ಮತಗಟ್ಟೆಗಳಿಗೆ ತೀವ್ರ ನಿಗಾ ವಹಿಸುವ ಮೂಲಕ ಆಯಾ ವ್ಯಾಪ್ತಿಯ ಮತದಾರರು ನಿರ್ಭಯದಿಂದ ಮುಕ್ತ ವಾತಾವರಣದಲ್ಲಿ ತಮ್ಮ ಹಕ್ಕು ಚಲಾಯಿಸಲು ಚುನಾವಣಾ ಆಯೋಗದೊಂದಿಗೆ ಜಿಲ್ಲಾಡಳಿತಕ್ಕೆ ಪೊಲೀಸ್ ಇಲಾಖೆಯು ಸಹಕಾರ ನೀಡಲಿರುವದಾಗಿ ನೆನಪಿಸಿದರು.
ಈಗಾಗಲೇ ಈ ಸಂಬಂಧ ಗಾಳಿಬೀಡು ಗ್ರಾ. ಪಂ. ವ್ಯಾಪ್ತಿಯ ಕಾಲೂರು ಹಾಗೂ ಇತರ ಮತಗಟ್ಟೆ ಪ್ರದೇಶ; ನಾಪೋಕ್ಲು ವ್ಯಾಪ್ತಿಯ ನಾಲಡಿ ಮುಂತಾದೆಡೆ; ಭಾಗಮಂಡಲ ವ್ಯಾಪ್ತಿ ಮತ್ತು ದಕ್ಷಿಣ ಕೊಡಗಿನ ಬಿರುನಾಣಿ ಸುತ್ತಮುತ್ತಲಿನ ಕೆಲವು ಮತಗಟ್ಟ್ಟೆಗಳೊಂದಿಗೆ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ಸಂಬಂಧ ನಿಗಾವಿಡಲಾಗಿದೆ ಎಂದರು.
ಕೊಡಗಿನ ಮತದಾರರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿನ ಎಲ್ಲ ಮತಗಟ್ಟ್ಟೆಗಳಲ್ಲಿ ತಾ. 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮುಕ್ತ ವಾತಾವರಣದಲ್ಲಿ ಮತ ಚಲಾಯಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಹಕಾರವನ್ನು ಪಡೆಯಲಾಗಿದೆ ಎಂದು ಉಲ್ಲೇಖಿಸಿದರು. ಯಾವದೇ ವದಂತಿ, ಅಪಪ್ರಚಾರಗಳಿಗೆ ಜನತೆ ಕಿವಿಗೊಡದೆ, ಭಯ ಮುಕ್ತ ವಾತಾವರಣದಲ್ಲಿ ಮತ ಚಲಾಯಿಸುವಂತೆ ಎಸ್ಪಿ ಕರೆಯಿತ್ತರು.
ಆಂತರಿಕ ಭದ್ರತಾ ಸಭೆ
ನೆರೆಯ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆ ಸೇರಿದಂತೆ ನಿನ್ನೆ ದಿನ ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳ ಪೊಲೀಸ್ ಅಧೀಕ್ಷಕರ ಸಭೆÉಯನ್ನು ಕರ್ನಾಟಕ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಪ್ರತಾಪರೆಡ್ಡಿ ಉಪಸ್ಥಿತಿಯಲ್ಲಿ ನಡೆಸಲಾಗಿದೆ ಎಂದು ಎಸ್ಪಿ ಮಾಹಿತಿಯಿತ್ತರು.
ಚುನಾವಣೆ ಸಂದರ್ಭ ಯಾವದೇ ಅಕ್ರಮ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಾಗದಂತೆ ಆಂತರಿಕ ಭದ್ರತೆ ದೃಷ್ಟಿಯಿಂದ ಸಭೆಯಲ್ಲಿ ಗಂಭೀರ ಚರ್ಚಿಸಲಾಗಿದ್ದು, ಮೇಲಧಿಕಾರಿಗಳು ಮಾರ್ಗದರ್ಶನ ನೀಡಿದರೆಂದು ಅವರು “ಶಕ್ತಿ” ಯೊಂದಿಗೆ ಪ್ರತಿಕ್ರಿಯಿಸಿದರು. ಮೈಸೂರಿನಲ್ಲಿ ಈ ಮಹತ್ವದ ಸಭÉಯಲ್ಲಿ ತಾನೂ ಸೇರಿದಂತೆ ಇತರ ಜಿಲ್ಲೆಗಳ ಅಧಿಕಾರಿಗಳು ಹಾಜರಿದ್ದುದಾಗಿ ತಿಳಿಸಿದರು.
ಅಂತಿಮ ಪರಿಶೀಲನೆ
ಜಿಲ್ಲೆಯ ಎಲ್ಲ 538 ಮತಗಟ್ಟೆಗಳಲ್ಲಿ ಭದ್ರತಾ ದೃಷ್ಟಿಯಿಂದ ತಯಾರಿ ನಡೆದಿದ್ದು, ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠರ ನಿರ್ದೇಶನದಂತೆ ಮುಂಜಾಗ್ರತೆ ವಹಿಸಲಾಗುವದು ಎಂದು ವಿವರಿಸಿದ ಎಸ್ಪಿ ಸೂಕ್ಷ್ಮ, ಅತಿ ಸೂಕ್ಷ್ಮ ಸೇರಿದಂತೆ ಮತಗಟ್ಟೆಗಳ ಸ್ಥಿತಿಗತಿ ಕುರಿತು ಅಂತಿಮವಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವದು ಎಂಬದಾಗಿ ಮಾಹಿತಿಯಿತ್ತರು.