ಮಡಿಕೇರಿ, ಮೇ 5 : ಬ್ಯಾಟಿಂಗ್‍ನಲ್ಲಿ ಕಳೆಗುಂದಿದ ಕುದುಪಜೆ ಎರಡೂ ವಿಭಾಗದಲ್ಲೂ ಕರಾಮತ್ತು ತೋರಿದ ತಳೂರು..., ತಳೂರು ತಂಡಕ್ಕೆ ಜೀವ ತುಂಬಿದ ಜಿತು..., ವ್ಯರ್ಥವಾದ ಕುದುಪಜೆ ಸಚಿನ್ ಹೋರಾಟ. ಎರಡನೇ ಬಾರಿಗೆ ತಳೂರು ತಂಡಕ್ಕೆ ಒಲಿದ ಚಾಂಪಿಯನ್ ಪಟ್ಟ.

ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಚೆರಿಯಮನೆ ಕ್ರಿಕೆಟ್ ಕಪ್ ಪಂದ್ಯವಾಳಿಯಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ತಳೂರು ತಂಡ ಈ ಬಾರಿಯು ವಿಜಯ ಪತಾಕೆ ಹಾರಿಸಿತು. ಕುದುಪಜೆ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇಂದು ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದ ತಳೂರು ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ಕುದುಪಜೆ ತಂಡದ ಆಟಗಾರರಲ್ಲಿ ತಂಡದ ನಾಯಕ ಕುದುಪಜೆ ಸಚಿನ್ ಒಂದು ಸಿಕ್ಸರ್, ಎರಡು ಬೌಂಡರಿ ಒಳಗೊಂಡು 20 ರನ್ ಬಾರಿಸಿದ್ದು, ಹೊರತುಪಡಿಸಿ ಉಳಿದ ಬ್ಯಾಟ್ಸ್‍ಮನಗಳು ತಳೂರು ತಂಡದ ಚಾಕಚಕ್ಯತೆಯ ಆಟದೆದುರು ಶರಣಾದರು. 12 ಓವರ್‍ಗಳಿಗೆ ಕೇವಲ 49 ರನ್‍ಗಳಿಸಿ ಕುದುಪಜೆ ತಂಡ ಆಲೌಟ್ ಆಯಿತು. ತಳೂರು ಪರ ಜಿತು 3 ಓವರ್‍ಗೆ 11 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಕುದುಪಜೆ ನೀಡಿದ ಅಲ್ಪಮೊತ್ತವನ್ನು ಬೆನ್ನತ್ತಿದ್ದ ತಳೂರು ತಂಡದ ಭರವಸೆ ಆಟಗಾರರಾದ ತಳೂರು ವಿಜು ಹಾಗೂ ವಿಕ್ಕಿ ಅವರುಗಳ ವಿಕೆಟ್ ಪತನವಾಗುತ್ತಿದ್ದಂತೆ ಕುದುಪಜೆ ಆಟಗಾರರಲ್ಲಿ ಕೊಂಚ ಆತ್ಮವಿಶ್ವಾಸ ಹೆಚ್ಚಾದಂತೆ ಕಂಡು ಬಂತು. ಆದರೆ ಬಳಿಕ ಕ್ರೀಸ್‍ಗೆ ಬಂದ ತಳೂರು ಜಿತು 2 ಸಿಕ್ಸರ್ ಒಳಗೊಂಡು 21 ರನ್ ಬಾರಿಸುವ ಮೂಲಕ ಕುದುಪಜೆ ತಂಡದ ಗೆಲುವಿನ ಕನಸಿಗೆ ತಣ್ಣಿರೆರಚಿದರು. ಬೌಲಿಂಗ್ ವಿಭಾಗದಲ್ಲಿನ ಬಲವನ್ನೇ ನಂಬಿಕೊಂಡಿದ್ದ ಕುದುಪಜೆ ಪರ ಸಚಿನ್ ಹಾಗೂ ರೋಷನ್ ತಲಾ ಎರಡು ವಿಕೆಟ್ ಪಡೆದರು. ತಳೂರು 4 ವಿಕೆಟ್ ಕಳೆದುಕೊಂಡು 7.4 ಓವರ್‍ನಲ್ಲಿ 50 ರನ್ ಬಾರಿಸಿ ಜಯ ಸಾಧಿಸಿತು.

ಅಂತಿಮ ಪಂದ್ಯಾಟದಲ್ಲಿ ಚೆರಿಯಮನೆ ಕ್ರಿಕೆಟ್ ಸಮಿತಿ ಅಧ್ಯಕ್ಷ ರಾಮಚಂದ್ರ ಉದ್ಘಾಟಿಸಿದರು. ಪಂದ್ಯಾಟಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಲಾಯಿತು.