ಮಡಿಕೇರಿ, ಮೇ 5 : ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ತನ್ನದೇ ಆದ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಬಿಡುಗಡೆ ಮಾಡಿದೆ. ಪೊನ್ನಂಪೇಟೆ ಮತ್ತು ಕಾವೇರಿ ತಾಲೂಕು ರಚನೆ, ಜೀವನದಿ ಕಾವೇರಿಯ ಸಂರಕ್ಷಣೆಗೆ ಒತ್ತು, ರಸ್ತೆ ಅಭಿವೃದ್ಧಿಗೆ ಪ್ರತ್ಯೇಕವಾಗಿ ವಾರ್ಷಿಕ 200 ಕೋಟಿ ರೂ. ಅನುದಾನ, ಕೌಟುಂಬಿಕ ಕ್ರೀಡೆ ಸೇರಿದಂತೆ ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರತೀ ಬಜೆಟ್‍ನಲ್ಲಿ 10 ಕೋಟಿ ರೂ. ಮೀಸಲು ಸೇರಿದಂತೆ ಸುಮಾರು 19 ಅಂಶಗಳು ಪ್ರಣಾಳಿಕೆಯಲ್ಲಿವೆ.

ನಗರದ ಪತ್ರಿಕಾಭವನದಲ್ಲಿ ಬಿಜೆಪಿಯ ಕೊಡಗು ಜಿಲ್ಲಾ ಚುನಾವಣಾ ಉಸ್ತುವಾರಿಗಳೂ ಆಗಿರುವ ಭಾರತ ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಧರ್ಮನಾರಾಯಣ್ ಜೋಶಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಕುರಿತು ಸಮಿತಿ ಸಂಚಾಲಕ ಬಿ.ಡಿ. ಮಂಜುನಾಥ್ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ಪೊನ್ನಂಪೇಟೆ ಹಾಗೂ ಕಾವೇರಿ (ಕುಶಾಲನಗರ) ತಾಲೂಕು ರಚನೆ, ಕೊಡಗಿನ ಜೀವನದಿ ಕಾವೇರಿಯ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವದರೊಂದಿಗೆ ಕೊಡಗಿನಲ್ಲಿ ಮಳೆಯಿಂದ ಹಾಳಾಗುವ ರಸ್ತೆ ಹಾಗೂ ಸರಕಾರಿ ಕಟ್ಟಡಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ ವಾರ್ಷಿಕ 200 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮೀಸಲಿಡಲಾಗುವದಲ್ಲದೆ, ಕೊಡಗಿನ ರಸ್ತೆಗಳ ಅಭಿವೃದ್ಧಿಗೆ

(ಮೊದಲ ಪುಟದಿಂದ) ಈ ಹಿಂದಿನಂತೆಯೇ ಗ್ಯಾಂಗ್‍ಮನ್‍ಗಳನ್ನು ಸರಕಾರದಿಂದಲೇ ನೇಮಕ ಮಾಡಿ ವಾರ್ಷಿಕ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಲಾಗುವದು.

ಕೌಟುಂಬಿಕ ಹಾಕಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತೀ ವರ್ಷ ಬಜೆಟ್‍ನಲ್ಲಿ 10 ಕೋಟಿ ರೂ.ಗಳನ್ನು ಮೀಸಲಿಡುವದರೊಂದಿಗೆ ಜಿಲ್ಲೆಯಲ್ಲಿ ಮಲ್ಟಿ ಸ್ಪೋಟ್ರ್ಸ್ ಅಕಾಡೆಮಿ ಸ್ಥಾಪನೆಗೆ ಒತ್ತು ನೀಡಲಾಗುವದು ಎಂದರು.

ದಸರಾ, ಕಾವೇರಿ ಸಂಕ್ರಮಣ ಹಾಗೂ ಇತರ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಕನಿಷ್ಟ 2 ಕೋಟಿ ರೂ.ಗಳನ್ನು ಪ್ರತೀ ವರ್ಷ ಬಜೆಟ್‍ನಲ್ಲಿ ಕಾಯ್ದಿರಿಸುವದರೊಂದಿಗೆ ಆ ಮೂಲಕ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವದು. ಜಿಲ್ಲೆಯಲ್ಲಿ ಆನೆ, ಹುಲಿ ಮುಂತಾದ ವನ್ಯ ಪ್ರಾಣಿಗಳಿಂದ ತೊಂದರೆಗೊಳಗಾದ ಬೆಳೆಗಾರರು ಹಾಗೂ ರೈತರಿಗೆ ಮತ್ತು ಜನಸಾಮಾನ್ಯರಿಗೆ ಅತಿ ಹೆಚ್ಚಿನ ಪರಿಹಾರವನ್ನು ಬಜೆಟ್‍ನಲ್ಲಿ ಘೋಷಿಸಲಾಗುವದು. ಖಾಸಗಿ ಜಮೀನುಗಳಿಗೆ ಬಂದು ತೊಂದರೆ ನೀಡುವ ಆನೆಗಳನ್ನು ತಕ್ಷಣ ಸೆರೆ ಹಿಡಿದು ಕಾಡಿಗೆ ಬಿಡಲು ಮತ್ತು ಆನೆಗಳು ನಾಡಿಗೆ ಬರದಂತೆ ಅವುಗಳಿಗೆ ಕಾಡಿನಲ್ಲಿ ಕುಡಿಯುವ ನೀರು, ಆಹಾರ ಒದಗಿಸುವ ಶಾಶ್ವತ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮಾಡಲಾಗುವದು.

ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮಘಟ್ಟಗಳ ಅಡಿಯಲ್ಲಿ ಬರುವ ಪ್ರದೇಶದ ಜನರಿಗೆ ಯಾವದೇ ತೊಂದರೆಯಾಗದಂತೆ ಕೇಂದ್ರಕ್ಕೆ ವರದಿ ನೀಡುವದು, ಕೇಂದ್ರ ಸರಕಾರದ ಯೋಜನೆಗಳಾದ ದೀನದಯಾಳ್ ಮತ್ತು ಸೌಭಾಗ್ಯ ವಿದ್ಯುತ್ ವಿತರಣೆ ಅಭಿವೃದ್ಧಿಗೆ ಕೇಂದ್ರ ಸರಕಾರದ ಅನುದಾನದ ಜೊತೆಗೆ ರಾಜ್ಯ ಸರಕಾರದಿಂದಲೂ ಅನುದಾನ ಬಿಡುಗಡೆ ಮಾಡಿ ಕೊಡಗಿನ ಎಲ್ಲಾ ಜನರಿಗೆ ವರ್ಷಪೂರ್ತಿ ನಿರಂತರ ವಿದ್ಯುತ್ ಸರಬರಾಜು ಕಲ್ಪಿಸಲು ಕ್ರಮವಹಿಸಲಾಗುವದು.

ಕರಿಮೆಣಸು, ಕಿತ್ತಳೆ, ಅಡಿಕೆ ಬೆಳೆಗಳನ್ನು ಎಪಿಎಂಸಿ ಕಾಯ್ದೆಯಿಂದ ಹೊರಗಿಡಲು ಕ್ರಮ ಮತ್ತು ಕರಿಮೆಣಸು ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳನ್ನು ಕಲಬೆರಕೆ ಮಾಡುವವರಿಗೆ ಕಾನೂನಿನಡಿ ಉಗ್ರ ಶಿಕ್ಷೆ. ಕೊಡಗಿನ ಜಲಮೂಲಗಳಿಂದ (ಹಾರಂಗಿ ನೀರು ಸೇರಿದಂತೆ) ಸ್ಥಳೀಯ ಬೆಳೆಗಾರರು ತಮ್ಮ ಕೃಷಿ ಕಾರ್ಯಗಳಿಗೆ ಯಾವದೇ ಶುಲ್ಕವಿಲ್ಲದೆ ನೀರನ್ನು ಉಪಯೋಗಿಸಲು ಕಾನೂನು. ಪ್ರತಿ ಗ್ರಾಮ ಪಂಚಾಯಿತಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ನಗರ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ಘಟಕ ಸ್ಥಾಪನೆ.

ಕೊಡಗಿನ ಜಮ್ಮಾ ಬಾಣೆಗಳನ್ನು ಕಂದಾಯ ಭೂಮಿಗಳನ್ನಾಗಿ ಪರಿವರ್ತಿಸುವದು ಹಾಗೂ ರೈತರು ಬೆಳೆದ ಬೆಳೆಗಳನ್ನು ಸುಸ್ಥಿತಿಯಲ್ಲಿಡಲು ಮೂರು ತಾಲೂಕುಗಳಲ್ಲೂ ಬೃಹತ್ ಶೀತಲೀಕರಣ ಘಟಕ ಹಾಗೂ ದಾಸ್ತಾನು ಮಳಿಗೆಗಳ ಸ್ಥಾಪನೆ, ಹೈನುಗಾರಿಕೆ ಅಭಿವೃದ್ಧಿಗಾಗಿ ಕೊಡಗಿನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ

ಬಿಎಸ್‍ಎಫ್ ಸೇರಿದಂತೆ ಮಾಜಿ ಸೈನಿಕರಿಗೆ ಮನೆ ಮತ್ತು ಮನೆ ಕಟ್ಟಲು ನಿವೇಶನ, ಭೂರಹಿತರಿಗೆ ವ್ಯವಸಾಯ ಮಾಡಲು ಜಮೀನು ನೀಡುವ ಬಗ್ಗೆ ಸರಕಾರದಿಂದ ಕ್ರಮ, ಮಡಿದ ಸೈನಿಕರ ಕುಟುಂಬಗಳಿಗೆ ಪ್ರಸಕ್ತ ದೊರೆಯುವ ಅನುದಾನವನ್ನು ದುಪ್ಟಟ್ಟುಗೊಳಿ ಸುವದು, ಕೊಡಗಿನಲ್ಲಿ ಅನೇಕ ವರ್ಷಗಳಿಂದ ವಾಸವಾಗಿರುವ ವಸತಿಹೀನರಿಗೆ ಅಪಾರ್ಟ್‍ಮೆಂಟ್ ಮಾದರಿಯಲ್ಲಿ ಸರಕಾರದಿಂದ ಮನೆ ನಿರ್ಮಾಣ, ಅನ್ನಭಾಗ್ಯದ ಪಡಿತರ ಕುಟುಂಬಗಳಿಗೆ ಆದ್ಯತೆ, ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ವ್ಯವಸಾಯ ಮಾಡಿಕೊಂಡಿರುವವರಿಗೆ 5 ಎಕರೆವರೆಗೆ ಭೂಮಿ ಸಕ್ರಮಗೊಳಿಸಲು ಫಾರಂ 50-53 ಅಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವದು.

ರೈಲು ಮಾರ್ಗ-ವಿಮಾನ ನಿಲ್ದಾಣ

ಮೈಸೂರು-ಕುಶಾಲನಗರ ರೈಲ್ವೆ ಯೋಜನೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಹಾಗೂ ಕೊಡಗಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ, ಭಯೋತ್ಪಾದನಾ ಚಟುವಟಿಕೆ ಹಾಗೂ ಸಮಾಜಘಾತುಕ ಶಕ್ತಿಗಳ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮ, ಅಸಂಘಟಿತ ಕೂಲಿ ಕಾರ್ಮಿಕರಿಗೆ ಕೇಂದ್ರ ಸರಕಾರ ನೀಡಿರುವ 5 ಲಕ್ಷದವರೆಗಿನ ಉಚಿತ ವೈದ್ಯಕೀಯ ಸೌಲಭ್ಯವನ್ನು ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟದ ಕಾರ್ಮಿಕರಿಗೂ ವಿಸ್ತರಿಸಲು ಕ್ರಮವಹಿಸುವದು, ಸಾರ್ವಜನಿಕ ಕೆರೆ, ದೇವರಕಾಡು, ದೇವಸ್ಥಾನಗಳನ್ನು ಪುನಶ್ಚೇತನಗೊಳಿಸುವದು ಮತ್ತು ಸಂರಕ್ಷಿಸಲು ಎಲ್ಲಾ ರೀತಿಯ ಕ್ರಮವಹಿಸುವದು ಬಿಜೆಪಿಯ ಆದ್ಯತೆಗಳಾಗಿವೆ ಎಂದು ಬಿ.ಡಿ.ಮಂಜುನಾಥ್ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು ಶಾಸಕರ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆÉ ಎಂದು ಸಮರ್ಥಿಸಿಕೊಂಡರು.

ಪ್ರಣಾಳಿಕೆ ಸಮಿತಿ ಸಹ ಸಂಚಾಲಕ ಗಿರೀಶ್ ಗಣಪತಿ ಉಪಸ್ಥಿತರಿದ್ದರು.