ಮಡಿಕೇರಿ, ಮೇ.5: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳೊಂದಿಗೆ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ತಾ. 12 ರಂದು ಸಾರ್ವತ್ರಿಕ ಮತದಾನ ನಡೆಯಲಿದೆ. ಇನ್ನು ಕೇವಲ ಏಳು ದಿನಗಳಷ್ಟೇ ಬಾಕಿ ಉಳಿದಿವೆ. ಚುನಾವಣಾ ಸಂಬಂಧ ಪ್ರಮುಖ ರಾಜಕೀಯ ಪಕ್ಷಗಳಿಂದ ದಿನೇ ದಿನೇ ಪ್ರಚಾರ ರಂಗೇರತೊಡಗಿದ್ದು, ಶಾಂತಿ ಸುವ್ಯವಸ್ಥೆಯೊಂದಿಗೆ ಮತದಾನ ಪೂರ್ಣಗೊಳಿಸಲು ಜಿಲ್ಲಾಡಳಿತ ಸನ್ನದ್ಧಗೊಳ್ಳತೊಡಗಿದೆ.ಪ್ರಸಕ್ತ ನಡೆಯಲಿರುವ ಚುನಾವಣೆ ಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯ ಮಹಿಳಾ ಮತದಾರರಿದ್ದು, ಈ ಕ್ಷೇತ್ರದಲ್ಲಿ ಪುರುಷರಿಗಿಂತಲೂ 1622 ಮಂದಿ ಮಹಿಳೆಯರು ಅಧಿಕವಿರುವದು ಗೋಚರಿಸಿದೆ. ಈ ಕ್ಷೇತ್ರದ ಮತದಾರರ ಪೈಕಿ 2,16,112 ಮಂದಿ ಪುರುಷರು ಹಾಗೂ 2,17,734 ಮಂದಿ ಮಹಿಳಾ ಮತದಾರರಿರುವದು ಕಂಡುಬಂದಿದ್ದು, ಇತರ 17 ಮಂದಿ ಮತದಾನದ ಹಕ್ಕುದಾರಿಕೆ ಪಡೆದಿದ್ದಾರೆ.ಅತ್ತ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು ಮಹಿಳೆಯರಿಗಿಂತಲೂ ಅಲ್ಪ ಅಂತರದಲ್ಲಿ ಅಧಿಕಗೊಂಡಿರುವ ಅಂಶ ಕಂಡುಬಂದಿದೆ. ಈ ಕ್ಷೇತ್ರದಲ್ಲಿ ಒಟ್ಟು 2.16,909 ಮಂದಿ ಮತದಾರರಿದ್ದಾರೆ. ಅವರುಗಳಲ್ಲಿ
(ಮೊದಲ ಪುಟದಿಂದ) ಪುರುಷರ ಸಂಖ್ಯೆಯು 1,08,580 ರಷ್ಟಿದ್ದರೆ ಮಹಿಳಾ ಮತದಾರರು 1,08,329 ಮಂದಿಯಿದ್ದಾರೆ. ಹೀಗಾಗಿ, ಇಲ್ಲಿ ಮಹಿಳಾ ಹಕ್ಕುದಾರಿಕೆಗಿಂತಲೂ ಪುರುಷರು 251 ಮಂದಿ ಅಧಿಕವಿರುವದು ಕಂಡುಬಂದಿದೆ. ಇತರ ಮತದಾರರು ಈ ಕ್ಷೇತ್ರದಲ್ಲಿ 11 ಮಂದಿ ಹಕ್ಕುದಾರಿಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಎರಡು ವಿಧಾನಸಭಾ ಕ್ಷೇತ್ರಗಳಿಂದ 4,33,846 ಮಂದಿ ಮತದಾರರಿದ್ದು ಈ ಪೈಕಿ 2,16,112 ಮಂದಿ ಪುರುಷರು ಹಾಗೂ 2,17,734 ಮಂದಿ ಮಹಿಳೆಯರು ಈ ಬಾರಿಯ ಚುನಾವಣಾ ಕಣದಲ್ಲಿರುವ 17 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ತಾ. 12 ರಂದು ಬರೆಯಲಿದ್ದಾರೆ.
ಪ್ರಸಕ್ತ ಹೊಸ ಮತದಾರರು 8,823 ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ. ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಇಲ್ಲದೇ ಇದ್ದರೆ, ಮಾನ್ಯತೆ ಪಡೆದ 12 ಬಗೆಯ ಯಾವದಾರೂ ಒಂದು ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.
ಪಾಸ್‍ಪೋರ್ಟ್, ಚಾಲನಾ ಪರವಾನಗಿ ಪತ್ರ, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ನರೇಗಾ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಆರೋಗ್ಯ ವಿಮಾ ಚೀಟಿ, ಆರ್‍ಜಿಐ ವತಿಯಿಂದ ನೀಡಿರುವ ಚೀಟಿ, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಚುನುವಾಣಾ ಆಯೋಗ ನೀಡುವ ವೋಟರ್ ಸ್ಲಿಪ್, ಎಂಪಿ, ಎಂಎಲ್‍ಎ ಮತ್ತು ಎಂಎಲ್‍ಸಿ ಗಳಿಗೆ ನೀಡಿರುವ ಕಾರ್ಡ್‍ಗಳು ಮತ್ತು ಆಧಾರ್ ಕಾರ್ಡ್ ಹೀಗೆ 12 ರೀತಿಯ ಕಾರ್ಡ್‍ಗಳಲ್ಲಿ ಯಾವದಾದರೂ ಒಂದನ್ನು ತೋರಿಸಿ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.
ವಿವಿಪ್ಯಾಟ್ ಜಾಗೃತಿ
ಭಾರತ ಚುನಾವಣಾ ಆಯೋಗವು ವಿದ್ಯುನ್ಮಾನ ಮತ ಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಜೊತೆಗೆ ಈ ಬಾರಿ ವಿವಿಪ್ಯಾಟ್ ಅನ್ನು ಪರಿಚಯಿಸುತ್ತಿದೆ. ಮತದಾರರು ತಾವು ಮತವನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ನಾನಾ ಮತಗಟ್ಟೆಗಳ ವ್ಯಾಪ್ತಿಗೆ ನಿಯೋಜಿಸಿರುವ ಸೆಕ್ಟರ್ ಅಧಿಕಾರಿಗಳು ವಿವಿಪ್ಯಾಟ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸುತ್ತಿರುವದು ವಿಶೇಷವಾಗಿದೆ. ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ವ್ಯವಸ್ಥಿತ ಮತ್ತು ಜಾಗೃತಿ ಸಮಿತಿ(ಸ್ವೀಪ್) ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳು ನಡೆಯುತ್ತಿವೆ.
ಮತದಾರ ಮತದಾನ ಮಾಡುವ ಸಂದರ್ಭದಲ್ಲಿ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ ಪರದೆಯಲ್ಲಿ ಮತದಾರನು ತಾನು ಮತ ಚಲಾಯಿಸಿರುವ ಚಿಹ್ನೆ ಮತ್ತು ಹೆಸರಿನ ವಿವರವುಳ್ಳ ಚೀಟಿಯನ್ನು 7 ಕ್ಷಣಗಳ ಕಾಲ ‘ಡಿಸ್‍ಪ್ಲೇ ಸೆಕ್ಷನ್’ ನಲ್ಲಿ ವೀಕ್ಷಿಸಬಹುದು. ನಂತರ ಆ ಚೀಟಿಯು ‘ಡ್ರಾಪ್ ಬಾಠಿï್ಸ’ ಒಳಗೆ ತುಂಡಾಗಿ ಬೀಳುತ್ತದೆ (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ).
ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ/ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ. ಬ್ಯಾಲೆಟ್ ಚೀಟಿ ಕಾಣಿಸದಿದ್ದರೆ ಹಾಗೂ ಬೀಪ್ ಶಬ್ದ ಕೇಳಿಸದಿದ್ದರೆ ಮತದಾರನು ಮತಗಟ್ಟೆಯ ಅಧ್ಯಕ್ಷಾಧಿಕಾರಿಯನ್ನು ಸಂಪರ್ಕಿಸಬಹುದು.
ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಜಾಗೃತಿಗೆ ಎಲ್ಲ ಕ್ರಮಗಳನ್ನು ಸ್ವೀಪ್ ಮೂಲಕ ಚುನಾವಣಾ ಆಯೋಗ ಕೈಗೊಂಡಿದೆ. ಚುನಾವಣಾ ಆಯೋಗವು ಸ್ವೀಪ್ ಮುಖಾಂತರ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಔಚಿತ್ಯಪೂರ್ಣ ಮತ್ತು ನ್ಯಾಯೋಚಿತ ಮತದಾನವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.
ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಆ ದಿಸೆಯಲ್ಲಿ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ನಗರದ ಗೌಳಿಬೀದಿ, ಹೊಸ ಬಡಾವಣೆ, ಕೊಹಿನೂರು ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಕೋರಿದರು.
ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು. ಹಾಗಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಶೇಕಡಾವಾರು ಮತದಾನವಾಗಲು ತಪ್ಪದೇ ಅರ್ಹರೆಲ್ಲರೂ ಮತ ಚಲಾಯಿಸಬೇಕಿದೆ ಎಂದು ಜಿ.ಪಂ.ಸಿಇಒ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನದ ಜಾಗೃತಿ ಅಭಿಯಾನದಲ್ಲಿ ದಿಶಾ ಸಂಸ್ಥೆಯ ಸಂಯೋಜಕ ಹೇಮಂತ್ ಇತರರು ಇದ್ದರು.