ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು, ಮೇ 6: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಎಸ್.ಎಸ್.ಎಲ್.ಸಿ. ಬೋರ್ಡ್‍ನಿಂದ ಸುದ್ದಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1 ಗಂಟೆ ನಂತರ ಇಲಾಖೆ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟ ಮಾಡುತ್ತದೆ. ಈ ಬಾರಿ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಪರೀಕ್ಷಾ ಭವಿಷ್ಯ ನಿರ್ಧಾರವಾಗಲಿದೆ. ತಾ. 8 ರಂದು ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಐವರು ಪ್ರತಿಭಟನಾಕಾರರ ಸಾವು

ಶ್ರೀನಗರ, ಮೇ 6: ಶೋಪಿಯಾನ್‍ನ ಬದ್ಗಾಮ್‍ನಲ್ಲಿ ಭಾರತೀಯ ಯೋಧರು ಕಾಶ್ಮೀರ ಯೂನಿರ್ವಸಿಟಿಯ ಓರ್ವ ಪೆÇ್ರಫೆಸರ್ ಸಹಿತ ಐವರು ಉಗ್ರರನ್ನು ಹೊಡೆದುರುಳಿಸಿತ್ತು. ಎನ್ಕೌಂಟರ್ ಬಳಿಕ ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವೆ ನಡೆದ ಕಲಹದಲ್ಲಿ ಐವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಬದಿಗಾಮ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ದೊರಕಿದ ಹಿನ್ನೆಲೆ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದು, ಕಾರ್ಯಾಚರಣೆ ಆರಂಭಿಸಿದ್ದವು. ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿತ್ತು. ಆ ಬಳಿಕ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಕಳೆದ 8 ವರ್ಷಗಳಿಂಗ ಅಹ್ಮದ್ ತಕ್ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲಷ್ಕರ್ ಇ ತೊಯ್ಬಾ ಕಮಾಂಡರ್‍ಗಳಾದ ಅಬು ದುಜಾನ, ಖ್ವಾಸಿಂ ಹಾಗೂ ಅಬು ರೆಹಮಾನ್ ಜೊತೆ ಅಹ್ಮದ್ ತಕ್ ನಿಕಟಸಂಪರ್ಕವನ್ನು ಹೊಂದಿದ್ದನೆಂದು ಹೇಳಲಾಗಿದೆ.

6 ಮಂದಿ ಭಾರತೀಯರ ಅಪಹರಣ

ಕಾಬೂಲ್, ಮೇ 6: ಆಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರದಾರಿಯೊಬ್ಬ ಆರು ಮಂದಿ ಭಾರತೀಯರನ್ನು ಅಪಹರಿಸಿರುವದಾಗಿ ವರದಿಯಾಗಿದೆ. ಆಫ್ಘಾನಿಸ್ತಾನದಲ್ಲಿನ ಭಾರತೀಯ ಮೂಲಸೌಕರ್ಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಭಾರತೀಯರನ್ನು ಬಂದೂಕುಧಾರಿಯೊಬ್ಬ ಅಪಹರಣ ಮಾಡಿರುವದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲಸಕ್ಕಾಗಿ ತೆರಳುತ್ತಿದ್ದಾಗ ಭಾರತೀಯರನ್ನು ಅಪಹರಿಸಲಾಗಿದೆ. ಈ ಕೃತ್ಯವನ್ನು ತಾಲಿಬಾನ್ ಉಗ್ರರು ಮಾಡಿರಬಹುದು ಎಂದು ಬಾಗ್ಲಾನ್ ಪ್ರಾಂತ್ಯದ ಕೌನ್ಸಿಲ್ ಶಂಕಿಸಿದೆ. ಈ ಕೃತ್ಯದ ಕುರಿತು ಯಾವದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.

ಡುರಿಶೆಟ್ಟಿ ಅನಿದೀಪ್‍ಗೆ ಮೊದಲ ರ್ಯಾಂಕ್

ನವದೆಹಲಿ, ಮೇ 6: 2017ನೇ ಸಾಲಿನ ಕೇಂದ್ರ ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ನಾಗರಿಕ ಸೇವಾ ಆಯೋಗ, ಮೊದಲ ರ್ಯಾಂಕ್‍ಗಳಿಸಿರುವ ಡುರಿಶೆಟ್ಟಿ ಅನಿದೀಪ್ ಶೇ. 55.60 ಅಂಕಗಳಿಸಿದ್ದಾರೆ. ಇದು ಪರೀಕ್ಷೆಯ ಗುಣಮಟ್ಟ ಮತ್ತು ಕಠಿಣ ಪರೀಕ್ಷಾ ವಿಧಾನವನ್ನು ಸೂಚಿಸುತ್ತದೆ. 28 ವರ್ಷದ ಭಾರತೀಯ ಕಂದಾಯ ಸೇವಾಧಿಕಾರಿ ಡುರಿಶೆಟ್ಟಿ ಅನಿದೀಪ್, 1,126 ಅಂಕಗಳನ್ನು ಗಳಿಸಿದ್ದು ಅವುಗಳಲ್ಲಿ 950 ಲಿಖಿತ ಪರೀಕ್ಷೆ ಮತ್ತು 176 ಸಂದರ್ಶನದಲ್ಲಿ ಬಂದಿದೆ. ಇದು ಒಟ್ಟು 2,025ರಲ್ಲಿ ಪಡೆದ ಅಂಕಗಳಾಗಿದೆ. ಮುಖ್ಯ ಪರೀಕ್ಷೆ 1750 ಅಂಕಗಳಿದ್ದು 275 ಅಂಕಗಳು ಸಂದರ್ಶನಕ್ಕೆ ಇದೆ. ದೇಶಕ್ಕೆ ದ್ವಿತೀಯ ಸ್ಥಾನಗಳಿಸಿರುವ ಅನು ಕುಮಾರಿ ಶೇ. 55.50 ಅಥವಾ 1,124 ಅಂಕಗಳಿಸಿದ್ದಾರೆ. ಅವುಗಳಲ್ಲಿ 937 ಲಿಖಿತ ಮತ್ತು 187 ಸಂದರ್ಶನಕ್ಕೆ ಬಂದಿವೆ. ಮೂರನೇ ಸ್ಥಾನ ಪಡೆದ ಸಚಿನ್ ಗುಪ್ತಾ ಶೇ. 55.40 ಅಂಕಗಳಿಸಿದ್ದು ಲಿಖಿತ ಪರೀಕ್ಷೆಯಲ್ಲಿ 946 ಮತ್ತು ಸಂದರ್ಶನದಲ್ಲಿ 176 ಅಂಕಗಳಿಸಿದ್ದಾರೆ.

ಪ್ರಧಾನಿ ವಿರುದ್ಧ ಆಯೋಗಕ್ಕೆ ದೂರು

ಗದಗ, ಮೇ 6: ಚುನಾವಣಾ ಪ್ರಚಾರ ಸಭೆಗಳಲ್ಲಿ ಸುಳ್ಳಿನ ಸರಮಾಲೆ ಹೆಣೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವದು ಎಂದು ಗದಗ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ. ಪಾಟೀಲ್ ಹೇಳಿದರು. ಭಾನುವಾರ ಗದಗದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಚುನಾವಣಾ ಭಾಷಣದಲ್ಲಿ ಹಸಿ ಸುಳ್ಳು ಹೇಳುತ್ತಿದ್ದು, ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಚುನಾವಣಾ ಅವ್ಯವಹಾರ. ಇದರ ವಿರುದ್ಧ ತ್ವರಿತ ಕ್ರಮ ವಹಿಸುವಂತೆ, ಐಪಿಸಿ ಮತ್ತು ಜನಪ್ರತಿನಿಧಿ ಕಾಯ್ದೆಯಡಿ ಆಯೋಗಕ್ಕೆ ದೂರು ಸಲ್ಲಿಸಲಾಗುವದು ಎಂದರು. ಕರ್ನಾಟಕದ ರಾಜಕೀಯ ಘಟನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮೋದಿ ಅವರು ಮಹದಾಯಿ ಬಗ್ಗೆ ಮಾತನಾಡಿದ್ದಾರೆ. ಸೋನಿಯಾ ಗಾಂಧಿ ಅವರು 2007 ರಲ್ಲೇ ಮಹದಾಯಿ ಯೋಜನೆಗೆ ತಮ್ಮ ವಿರೋಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ದೇಶದ ಪ್ರಧಾನಿಗೆ ಈ ಕುರಿತು ಕನಿಷ್ಟ ಮಾಹಿತಿಯೂ ಇಲ್ಲದಿರುವದು ಖೇದಕರ ಎಂದ ಅವರು, ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಪ್ರದರ್ಶಿಸಿದರು. ‘2008ರಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಮಹದಾಯಿ ವಿವಾದದ ಕುರಿತು ನ್ಯಾಯಮಂಡಳಿಗೆ ದೂರು ನೀಡಿತು. ಈ ವಾಸ್ತವಾಂಶವನ್ನು ಮರೆಮಾಚಿ, ಮೋದಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಪಡೆದುಕೊಂಡಿದ್ದೇ ಕಾಂಗ್ರೆಸ್ ಎಂದರು.

ಬಿಜೆಪಿಯಲ್ಲಿ 850 ಅಲ್ಪಸಂಖ್ಯಾತ ಅಭ್ಯರ್ಥಿಗಳು

ಕೋಲ್ಕತ್ತ, ಮೇ 6: ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತರ ಮತ ಬ್ಯಾಂಕ್ ವಶಪಡಿಸಿಕೊಳ್ಳಲು ಬಿಜೆಪಿಯು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ತಾ. 14 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ 850ಕ್ಕೂ ಹೆಚ್ಚು ಅಲ್ಪಸಂಖ್ಯಾತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದೆ. 2013 ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಪಕ್ಷದಿಂದ 100ಕ್ಕಿಂತ ಕಡಿಮೆ ಅಲ್ಪಸಂಖ್ಯಾತರು ಸ್ಪರ್ಧಿಸಿದ್ದರು. ಈ ಕುರಿತು ಟಿಎಂಸಿ ಪಕ್ಷದ ಮುಖಂಡ ಪಾರ್ಥ ಚಟರ್ಜಿ, ಬಿಜೆಪಿ ನಾಮಪತ್ರ ಸಲ್ಲಿಸಲು ಅಲ್ಪಸಂಖ್ಯಾತರಿಗೆ ಅವಕಾಶ ನೀಡುತ್ತದೆ. ಹಾಗೆಯೇ ರಾಜ್ಯದಲ್ಲಿ ಕೋಮುಕಲಹಗಳನ್ನು ಉತ್ತೇಜಿಸುತ್ತದೆ. ಅಲ್ಪಸಂಖ್ಯಾತರು ನಮ್ಮ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಶೇ. 30 ರಷ್ಟು ಜನರು ಅಲ್ಪಸಂಖ್ಯಾತ ಸಮುದಾಯದವರು. ಟಿಎಂಸಿ ಮತ್ತು ಇತರ ಪಕ್ಷಗಳು ಬಿಂಬಿಸಿದಂತೆ ಬಿಜೆಪಿ ಅಲ್ಪಸಂಖ್ಯಾತರ ಶತ್ರುವಲ್ಲ. ಈ ಅರಿವು ಅಲ್ಪಸಂಖ್ಯಾತ ಸಮುದಾಯದಲ್ಲಿಯೂ ಮೂಡಿದೆ ಎಂದು ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಲಿ ಹುಸೈನ್ ಹೇಳಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲಿಪ್ ಘೋಷ್, ಸ್ಥಳೀಯ ಚುನಾವಣೆಯಲ್ಲಿ ಪಕ್ಷದಿಂದ 2 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಹೇಳಿದರು.