ಮೂರ್ನಾಡು, ಮೇ 6: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಆಯೋಜಿಸಲಾದ ಬೇಸಿಗೆ ಕ್ರೀಡಾ ಶಿಬಿರ ಮುಕ್ತಾಯಗೊಂಡಿತು.

ವಿದ್ಯಾಸಂಸ್ಥೆಯ ಬಾಚ್ಚೆಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ 15 ದಿನಗಳ ಕಾಲ ಆಯೋಜಿಸಲಾದ ಹಾಕಿ ಮತ್ತು ಕ್ರಿಕೆಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂತರಾಷ್ಟ್ರೀಯ ಹಾಕಿ ಆಟಗಾರ ಡಾ. ಅಂಜಪರವಂಡ ಸುಬ್ಬಯ್ಯ ಮಾತನಾಡಿ, ಇಂದು ಸರ್ಕಾರದಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿದೆ. ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಹಕಾರ ದೊರಕುವದರಿಂದ ಸಣ್ಣ ಮಕ್ಕಳು ಕ್ರೀಡೆಯಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಬಹುದು. ನಿರಂತರ ಅಭ್ಯಾಸದಿಂದ ಮಾತ್ರ ಹಾಕಿ ಆಟವನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ ರಜಾ ದಿನಗಳಲ್ಲಿ ಎಲ್ಲಾ ಮಕ್ಕಳು ಶಿಬಿರದಲ್ಲಿ ಭಾಗವಹಿಸುವಂತಾಗಬೇಕು. ಶಿಬಿರದಲ್ಲಿ ಅಭ್ಯಸಿಸಿದ ಆಟವನ್ನು ಪ್ರತಿದಿನ ಮುಂದುವರೆಯಿಸಿದರೆ ಮುಂದೆ ಕ್ರೀಡೆಯಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಶಿಬಿರದಲ್ಲಿ ಪಾಲ್ಗೊಂಡ 60 ಮಂದಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಈ ಸಂದರ್ಭ ಹಾಕಿ ಕೂರ್ಗ್ ಕಾರ್ಯದರ್ಶಿ ಪಳಂಗಂಡ ಲವಕುಮಾರ್, ತರಬೇತುದಾರರಾದ ಅವರೆಮಾದಂಡ ಗಣೇಶ್, ಅವರೆಮಾದಂಡ ಪಚ್ಚು ಕುಶಾಲಪ್ಪ, ಕಂಬೀರಂಡ ಬೋಪಣ್ಣ, ದೇವಂಡಿರ ನಾಗೇಶ್ ಇತರರು ಹಾಜರಿದ್ದರು.