ಕುಶಾಲನಗರ: ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬೆನ್ನಲ್ಲೇ ಮಾರ್ಚ್ 28 ರಿಂದ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಸ್ಥಿರ ಕಣ್ಗಾವಲು ತಂಡದ ಕಾರ್ಯಾಚರಣೆ ಕಟ್ಟುನಿಟ್ಟಾಗಿ ನಡೆಯುತ್ತಿದ್ದು ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಕ್ರಮ ನಗದು ಸಾಗಾಟ, ಮದ್ಯ ಸರಬರಾಜು ಸೇರಿದಂತೆ ಮತದಾರರಿಗೆ ಆಮಿಷದ ವಿರುದ್ಧ ದಿನದ 24 ಗಂಟೆ ನಿಗಾವಹಿಸಲಾಗುತ್ತಿದೆ.

ಕುಶಾಲನಗರ ಗೇಟ್ ಬಳಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ಪಿಡಬ್ಲ್ಯುಡಿ ಇಲಾಖೆಯ ಅರುಣ್ ಸೇರಿದಂತೆ ಅಬಕಾರಿ ಇಲಾಖೆ, ವಾಣಿಜ್ಯ ಇಲಾಖೆ, ಪೊಲೀಸ್ ಮತ್ತು ಹೋಂಗಾರ್ಡ್‍ಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ಮೈಸೂರು ಕಡೆಯಿಂದ ಕುಶಾಲನಗರ ಕಡೆಗೆ ಬರುವ ಸಂದರ್ಭ ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ನಡುವೆ ಅಧಿಕಾರಿಗಳು ಮತ್ತು ಚುನಾವಣಾ ತಪಾಸಣಾ ತಂಡದ ನಡುವೆ ವಾಗ್ಯುದ್ದಗಳು ಕೂಡ ನಡೆದಿವೆ.

ಇದುವರೆಗೆ ಕುಶಾಲನಗರ ಗಡಿಭಾಗದಲ್ಲಿ ಯಾವದೇ ಅಕ್ರಮಗಳು ಪತ್ತೆಯಾಗಿಲ್ಲ ಎಂದು ಚುನಾವಣಾ ಸೆಕ್ಟರ್ ಅಧಿಕಾರಿ ಜಿ.ಆರ್. ಗಣೇಶನ್ ಮಾಹಿತಿ ನೀಡಿದ್ದಾರೆ. ವಾಹನ ತಪಾಸಣೆ ಸಂದರ್ಭ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಹಿನ್ನೆಲೆ ಎರಡು ಪ್ರಕರಣಗಳ ಬಗ್ಗೆ ಕುಶಾಲನಗರ ಠಾಣೆಯಲ್ಲಿ ದೂರು ನೀಡಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ. ಗಡಿಭಾಗದ ಮೈಸೂರು ವ್ಯಾಪ್ತಿಯಲ್ಲಿ ಆ ಭಾಗದ ಚುನಾವಣಾ ತಪಾಸಣಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ವಾರಾಂತ್ಯದಲ್ಲಿ ನೂರಾರು ವಾಹನಗಳು ಸಾಲಾಗಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಬಿಎಸ್‍ಎಫ್ ತಂಡದ ಸದಸ್ಯರನ್ನು ನಿಯೋಜಿಸಲಾಗಿದೆ. ಕುಶಾಲನಗರ ವ್ಯಾಪ್ತಿಗೆ 90 ಮಂದಿ ಯೋಧರನ್ನು ನಿಯೋಜಿಸಲಾಗಿದ್ದು ಪ್ರತಿ ಗೇಟ್‍ಗಳಲ್ಲಿ ತಲಾ 4 ಮಂದಿಯಂತೆ 3 ಪಾಳಿಯಲ್ಲಿ ಶಸ್ತ್ರಸಜ್ಜಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಾಷ್ಟ್ರೀಯ ಪಕ್ಷಗಳು ಮುಕ್ತಿ ಹೊಂದಿದರೆ ಪ್ರಗತಿ-ಪದ್ಮಿನಿ

ವೀರಾಜಪೇಟೆ: ರಾಷ್ಟ್ರೀಯ ಪಕ್ಷಗಳಿಗೆ ಕೊಡಗಿನಿಂದ ಮುಕ್ತಿ ನೀಡಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಸಾಧ್ಯ, ರಾಷ್ಟ್ರೀಯ ಪಕ್ಷಗಳಿಂದ ಜನತೆ ಬೇಸತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಬದಲಾವಣೆಯನ್ನು ಬಯಸಿದ್ದಾರೆ ಎಂದು ಜಾತ್ಯತೀತ ಜನತಾದಳದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ಜೆ.ಡಿ.ಎಸ್. ಜಿಲ್ಲಾ ಸಮಿತಿಯಿಂದ ವೀರಾಜಪೇಟೆ ಚುನಾವಣಾ ಕಚೇರಿಯಲ್ಲಿ ಪದ್ಮಿನಿ ಪೊನ್ನಪ್ಪ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಕ್ಷೇತ್ರದ ಅಭ್ಯರ್ಥಿ ಹಾಗೂ ಕಾರ್ಯಕರ್ತರುಗಳು ಸ್ವಾಗತಿಸಿದ ನಂತರ ಚುನಾವಣಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಜಾತ್ಯತೀತ ಜನತಾ ದಳ ಜಾತ್ಯತೀತ ಮನೋಭಾವ ಹೊಂದಿದ್ದು ಮಹಿಳೆಯರು ಸೇರಿದಂತೆ ಪ್ರತಿಯೊಂದು ವರ್ಗಗಳ ನಡುವೆ ಸಮಾನತೆಯನ್ನು ಕಾಯ್ದುಕೊಂಡಿದೆ. ಚುನಾವಣೆಯಲ್ಲಿ ಪಕ್ಷದ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವದು ಖಚಿತವಾಗಿದ್ದು ಸಮಾಜ ಸೇವೆ, ಸಾರ್ವಜನಿಕರ ಸೇವೆ ಕಡುಬಡವರು ಸೇವೆಯ ಮುಖ್ಯ ಉದ್ದೇಶವನ್ನಿಟ್ಟುಕೊಂಡಿರುವ ಮೇರಿಯಂಡ ಸಂಕೇತ್ ಪೂವಯ್ಯ ಅವರ ಗೆಲುವಿಗೆ ಕಾರ್ಯಕರ್ತರುಗಳು ಪ್ರಾಮಾಣಿವಾಗಿ ಶ್ರಮಿಸುವಂತೆ ಕರೆ ನೀಡಿದರು.

ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಮಾತನಾಡಿ ಎರಡು ರಾಷ್ಟ್ರೀಯ ಪಕ್ಷಗಳ ಮೇಲೆ ಮತದಾರರು ವಿಶ್ವಾಸ ಕಳೆದುಕೊಂಡಿದ್ದಾರೆ. ಕಾರ್ಮಿಕರು, ಬಡವರು, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಎರಡು ಪಕ್ಷಗಳು ಯಾವದೇ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ತಾರತಮ್ಯ ಮಾಡಿ ಮಲತಾಯಿ ಧೋರಣೆ ಅನುಸರಿಸಿದೆ ಎಂದರು ದೂರಿದರು.

ಸಭೆಯನ್ನುದ್ದೇಶಿಸಿ ಪಕ್ಷದ ರಾಜ್ಯ ಸಮಿತಿಯ ಹೊಸೂರು ಜೋಯಪ್ಪ, ಪ್ರಮುಖರಾದ ಪಾಣತ್ತಲೆ ವಿಶ್ವನಾಥ್, ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್ ಮಾತನಾಡಿದರು. ವೇದಿಕೆಯಲ್ಲಿ ಎಂ.ಕೆ. ಪೂವಯ್ಯ, ಸಿ.ಎ. ನಾಸರ್, ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.