ಕುಶಾಲನಗರ, ಮೇ 6: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾವೇರಿ ಜಲಾನಯನ ವ್ಯಾಪ್ತಿಯ ಕ್ಷೇತ್ರಗಳ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಜೀವನದಿ ಕಾವೇರಿಯ ಸಂರಕ್ಷಣೆಯ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ನಿಲುವು ಘೋಷಿಸುವ ಮೂಲಕ ಬದ್ದತೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಆಗ್ರಹಿಸಿದ್ದಾರೆ.

ಮೈಸೂರು ಪ್ರೆಸ್ ಕ್ಲಬ್‍ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೀವನದಿ ಕಾವೇರಿ ಹಲವು ಕಾರಣಗಳಿಂದ ಮೂಲದಿಂದಲೇ ಕಲುಷಿತಗೊಂಡು ಹರಿಯುವ ಮೂಲಕ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಬಗ್ಗೆ ಹಲವು ಹೋರಾಟಗಳು ನಡೆದರೂ ಸರಕಾರಗಳು ಯಾವದೇ ರೀತಿಯ ಯೋಜನೆಗಳನ್ನು ರೂಪಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ ವ್ಯಾಪ್ತಿಯ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ತಕ್ಷಣ ತಮ್ಮ ನಿಲುವನ್ನು ಪ್ರಕಟಿಸಿ ಸ್ವಚ್ಛ ಕಾವೇರಿಗೆ ಕೈಜೋಡಿಸಬೇಕು ಎಂದು ತಾಕೀತು ಮಾಡಿದರು. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ, ಕೇಂದ್ರ ಸರಕಾರಗಳ ಮೂಲಕ ಸ್ವಚ್ಛ ಕಾವೇರಿ ನಿರ್ಮಾಣದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವಂತೆ ಪ್ರಯತ್ನಿಸಬೇಕಾಗಿದೆ ಎಂದರು.

ಗೋಷ್ಠಿಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಹಾಸನ ಜಿಲ್ಲಾ ಸಂಚಾಲಕ ಎಂ.ಎನ್. ಕುಮಾರಸ್ವಾಮಿ, ಕಾವೇರಿ ನದಿ ಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ಡಿ.ಆರ್. ಸೋಮಶೇಖರ್, ಪ್ರಮುಖರಾದ ಕೆ.ಆರ್. ಶಿವಾನಂದನ್, ಕೆ.ಎನ್. ದೇವರಾಜ್ ಇದ್ದರು.