ಮಡಿಕೇರಿ: ಪ್ರಜಾತಂತ್ರ ವ್ಯವಸ್ಥೆ ಪವಿತ್ರವಾದದ್ದು, ಇದರ ಪಾವಿತ್ರ್ಯತೆಗೆ ಧಕ್ಕೆಯಾಗುವ ರೀತಿಯ ರಾಜಕಾರಣವನ್ನು ನಾನು ಮಾಡಿಲ್ಲ, ಮಾಡುವದೂ ಇಲ್ಲ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹೇಳಿದ್ದಾರೆ.

ತಾ. 6 ರ ಪತ್ರಿಕೆಯಲ್ಲಿ ದಕ್ಷಿಣ ಕೊಡಗಿನ ಕೆಲವು ಗ್ರಾಮದ ಕಾರ್ಯಕರ್ತರು ಜೆ.ಡಿ.ಎಸ್. ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬೆಳವಣಿಗೆ ತೀರಾ ನೋವುಂಟುಮಾಡಿದೆ. ಚುನಾವಣೆ ಸನ್ನಿಹಿತವಾಗಿರುವ ಕಾಲಘಟ್ಟದಲ್ಲಿ ಈ ರೀತಿಯಲ್ಲಿ ತೇಜೋವಧೆ ಮಾಡಿರುವದು ಸರಿಯಲ್ಲ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಯಾವದೋ ಹೊರಗಿನ ಶಕ್ತಿ ಇವರಿಂದ ಈ ರೀತಿ ಮಾಡಿಸಿರಬಹುದು. ಆದರೆ ಜನತೆಗೆ ತಾವು ಯಾರು ಎಂಬದು ತಿಳಿದಿದೆ. ಆದರೂ ಸುಳ್ಳು ಆಪಾದನೆಯಿಂದ ಸಹಜವಾಗಿ ನೋವು ತರುತ್ತದೆ. ಆರೋಪ ಮಾಡಿದವರೊಂದಿಗೆ ಚರ್ಚೆ ನಡೆಸಿದ ಸಂದರ್ಭ ಮತಗಟ್ಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಂತೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ನಿಲುವಿನಂಥೆ ಸೂಚಿಸಿದ್ದು ನಿಜ. ಆದರೆ ಯಾರನ್ನೂ ತಾವು ಅಗೌರವವಾಗಿ ನಡೆಸಿಕೊಂಡಿಲ್ಲ. ರಾಜಕೀಯದಲ್ಲಿ ವಿಪಕ್ಷದವರಿಗೂ ಗೌರವ ನೀಡುವ ವ್ಯಕ್ತಿತ್ವ ತನ್ನದು. ಪಕ್ಷಗಳಲ್ಲಿ ಸೈದ್ದಾಂತಿಕವಾದ ನಿಲುವು ಮಾತ್ರ ಬೇರೆ ಇರುತ್ತದೆಯೋ ಹೊರತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಸೈನಿಕರೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಪಾವಿತ್ರ್ಯತೆ ಉಳಿಸಿ ತಾವು ಚುನಾವಣೆ ಎದುರಿಸುವದಾಗಿ ಸಂಕೇತ್ ಪ್ರತಿಕ್ರಿಯಿಸಿದ್ದಾರೆ.