ಮಡಿಕೇರಿ, ಮೇ 6 : ವಿಧಾನಸಭಾ ಚುನಾವಣೆಯ ಮತದಾನವು ತಾ. 12 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದ್ದು, ಜಿಲ್ಲೆಯ 538 ಮತಗಟ್ಟೆಗಳಿಗೆ ನಿಯೋಜಿಸಿರುವ ಪಿಆರ್‍ಒ ಮತ್ತು ಎಪಿಆರ್‍ಗಳಿಗೆ (ಪ್ರಿಸೈಡಿಂಗ್ ಅಧಿಕಾರಿಗಳು) ಎರಡನೇ ಸುತ್ತಿನ ತರಬೇತಿ ಕಾರ್ಯಕ್ರಮ ಭಾನುವಾರ ನಡೆಯಿತು. ನಗರದ ಸಂತ ಜೋಸೆಫರ ಹಾಗೂ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನಡೆಯಿತು.
ಪಿಆರ್‍ಒ ಕರ್ತವ್ಯ: ಮತಗಟ್ಟೆ ಹಾಗೂ ಮತದಾನ ಸಮಯದಲ್ಲಿನ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುವದು, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಲ್ಲಿ ಸಾಮಾಗ್ರಿಗಳನ್ನು ಪಡೆಯುವದು ಮತ್ತು ನೀಡುವದು ಮತ್ತು ಪಡೆಯುವ ಸಂಪೂರ್ಣ ಜವಾಬ್ದಾರಿ, ಅಣುಕು ಮತದಾನ, ಮತದಾನ ಪ್ರಾರಂಭ, ಮತದಾನ ಮುಕ್ತಾಯಗೊಳಿಸುವ ಜವಾಬ್ದಾರಿ. ಮತದಾನದ ದಿವಸ ಎಲ್ಲಾ ಪ್ರಕ್ರಿಯೆಗಳ ಅಂಕಿ ಅಂಶಗಳ ಬಗ್ಗೆ ಚುನಾವಣಾಧಿಕಾರಿಗಳಿಗೆ ವರದಿ ಮಾಡುವದು ಪಿಆರ್‍ಒಗಳ ಕರ್ತವ್ಯವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಪಿ.ಆರ್.ಒ, ಎ.ಪಿ.ಆರ್.ಒ ಅಧಿಕಾರಿಗಳ ಜವಾಬ್ದಾರಿ ಮಹತ್ತರವಾಗಿದ್ದು, ಮಸ್ಟರಿಂಗ್ ದಿನ ಮತ್ತು ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ತರಬೇತಿದಾರ ಅಧಿಕಾರಿಗಳು ಮಾಹಿತಿ ನೀಡಿದರು.
ವಿದ್ಯುನ್ಮಾನ ಮತಯಂತ್ರಗಳು, ಅಣುಕು ಮತದಾನ, ಅಂಚೆ ಮತಪತ್ರ, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮತ್ತಿತರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ. ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕಿದೆ, ಮತದಾರರು ಚುನಾವಣಾ ಅಯೋಗ ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಚುನಾವಣಾ ಅಯೋಗದ ನಿರ್ದೇಶನದಂತೆ ಮತದಾನ ಮಾಡುವದಕ್ಕೆ ಅವಕಾಶ ನೀಡಬೇಕಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾಗಬೇಕು. ತಮ್ಮ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರಿಚಯ ಮಾಡಿಕೊಳ್ಳುವದು, ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡುವದು, ಯಾವದೇ ಮತಗಟ್ಟೆ ಅಧಿÀಕಾರಿ ಇತರೆ ಸಿಬ್ಬಂದಿ ಗೈರು ಆದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರಿಗೆ ತಿಳಿಸುವದು, ರಜೆ ಹೋದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವದು ಮಸ್ಟರಿಂಗ್ ಪಟ್ಟಿಯಿಂದ ದೃಡಪಡಿಸಿಕೊಳ್ಳಬೇಕಿದೆ ಎಂದು ಚುನಾವಣಾಧಿಕಾರಿಗಳು ಹೇಳಿದರು.
ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಅಳವಡಿಸುವದು. ಮತಗಟ್ಟೆಯಲ್ಲಿ ಮತದಾನದಂದು ಪೂರ್ವ ಸಿದ್ಧ್ದತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.
ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ: ಮತಗಟ್ಟೆ ಅಧಿಕಾರಿಗಳು ಶಾಂತಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಅಧಿಕಾರಿಯಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಸಾಮಾಗ್ರಿಗಳನ್ನು ಪಡೆದು ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವದು.
ರ್ಯಾಂಡಮೈಸ್ ತಂಡಕ್ಕೆ ಹಂಚಿಕೆ ಮಾಡಿರುವಂತೆ ಮತಗಟ್ಟೆ ಸಂಖ್ಯೆ ಗುರುತಿಸಿಕೊಳ್ಳುವದು, ತಮ್ಮ ಕಾರ್ಯತಂಡ ಸದಸ್ಯರ ಒಗ್ಗೂಡಿಸುವದು, ಸಾಮಾಗ್ರಿ ವಿತರಿಸುವ ಮಸ್ಟರಿಂಗ್ ಕೌಂಟರ್‍ಗೆ ತೆರಳುವದು, ತಂಡದ ಸದಸ್ಯರೊಂದಿಗೆ ಮಸ್ಟರಿಂಗ್ ವಿಭಾಗದಿಂದ ವಿವಿಧ ಸಾಮಾಗ್ರಿ ಪಡೆಯುವದು. ಸಾಮಾಗ್ರಿ ಪಡೆದ ನಂತರ ಮತ್ತೊಮ್ಮೆ ಸಾಮಾಗ್ರಿ ಪರಿಶೀಲಿಸಿಕೊಳ್ಳುವದು. ಮತಗಟ್ಟೆಗೆ ತಲುಪುವ ವಾಹನ ಗುರುತಿಸಿ ಸ್ಥಳ ಕಾಯ್ದಿರಿಸಿಕೊಳ್ಳುವದು.
ಮಸ್ಟರಿಂಗ್ ಕೌಂಟರ್‍ನಿಂದ ಪಡೆಯಬೇಕಾದ ಸಾಮಾಗ್ರಿ ವಿವರ: ಕಂಟ್ರೊಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್, ವಿಎಸ್‍ಡಿಯು ಆಡ್ರಸ್ ಟ್ಯಾಗ್, ವಿಶೇಷ ಟ್ಯಾಗ್, ಗ್ರೀನ್ ಪೇಪರ್ ಸೀಲ್, ಸೀಲ್ ವಿಶೇಷ ಸ್ಟೀಪ್ ಸ್ಟೀಲ್ ಇರುವುದೇ ಎಂದು ಖಾತರಿ ಪಡಿಸಿಕೊಳ್ಳುವದು.
ಮತಗಟ್ಟೆಗಾಗಿ ಸಿದ್ಧಪಡಿಸಿದ ಸಾಮಾಗ್ರಿಗಳು: ಗುರುತು ಮಾಡಿದ ಮತದಾರರ ಪಟ್ಟಿಗಳು, ಗುರುತು ಮಾಡಿದ ವರ್ಗೀಕೃತ ಸೇವಾ ಮತದಾರರಪಟ್ಟಿ, ರಬ್ಬರ್, ಮೊಹರು, ಪಿ.ಆರ್.ಒ ದಿನಚರಿ.
ಚುನಾವಣಾ ಸಾಮಾನ್ಯ ವೀಕ್ಷಕರಾದ ಟಿ.ಶ್ರೀಕಾಂತ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಹಲವು ಮಾರ್ಗದರ್ಶನ ನೀಡಿದರು. ಚುನಾವಣಾಧಿಕಾರಿಗಳಾದ ರಮೇಶ್ ಪಿ.ಕೊನರೆಡ್ಡಿ, ರಾಜು, ತಹಶೀಲ್ದಾರ್ ಶಾರದಾಂಭ, ಗೋವಿಂದರಾಜು, ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡೆಮೆಲ್ಲೊ, ಷಂಶುದ್ದೀನ್ ಹಾಗೂ ತರಬೇತಿಗೆ ನಿಯೋಜಿಸಿರುವ ಅಧಿಕಾರಿಗಳು ವಿಧಾನಸಭಾ ಚುನಾವಣೆ ಸಂಬಂಧ ಮಾಹಿತಿ ನೀಡಿದರು.