ಆಲೂರು-ಸಿದ್ದಾಪುರ, ಮೇ 6: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತ ಕೊಳಚೆ ನೀರು ನಿಂತುಕೊಳ್ಳದಂತೆ ಜಾಗೃತಿವಹಿಸುವದು, ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸುವದು ಹಾಗೂ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ರಕ್ಷಣೆ ಮಾಡಿಕೊಳ್ಳುವದರಿಂದ ಮಲೇರಿಯಾ ತಡೆಗಟ್ಟಬಹುದಾಗಿದೆ ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಅಭಿಪ್ರಾಯಪಟ್ಟರು.
ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಮಲೇರಿಯಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ತನ್ನನ್ನು ರಕ್ಷಣೆ ಮಾಡಿಕೊಳ್ಳುವದು, ಮನೆಯಲ್ಲಿ ಮಲಗುವಾಗ ಶರೀರದ ಮೇಲೆ ಬಟ್ಟೆ ಧರಿಸಿ ಮಲಗುವದು ಹಾಗೂ ಸೊಳ್ಳೆ ಪರದೆಯನ್ನು ಅಳವಡಿಸುವ ಕ್ರಮದಿಂದ ಮಲೇರಿಯಾ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ ಎಂದು ಮಾರ್ಗದರ್ಶನ ನೀಡಿದರು.
ಆರೋಗ್ಯ ನಿರೀಕ್ಷಕ ಶಿವಪ್ರಕಾಶ್ ಮಾತನಾಡಿ, ಮಲೇರಿಯಾ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ 2007 ರಿಂದ ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಈ ಸಂದರ್ಭ ಜನರಿಗೆ ವಿತರಿಸುವ ಸಲುವಾಗಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಸಿಮೆಂಟ್ ತೊಟ್ಟಿಯಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವಂತಹ ಮೀನಿನ ಮರಿಗಳನ್ನು ಬಿಡಲಾಯಿತು. ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ನಮಿತ ಮುಂತಾದವರು ಇದ್ದರು.