ಮಡಿಕೇರಿ, ಮೇ 6: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. 2018ರ ಜಿದ್ದಾ ಜಿದ್ದಿನ ಮತ ಸಮರಕ್ಕೆ ತಾ. 7 ರ ಸೋಮವಾರ ಸೇರಿ ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಮೇ 12 ರಂದು ಮತದಾನ ನಡೆಯಲಿದ್ದು, ಮೇ 10 ರ ಸಂಜೆ 6 ಕ್ಕೆ ಬಹಿರಂಗ ಪ್ರಚಾರಕ್ಕೂ ತೆರೆ ಬೀಳಲಿದೆ. ಲಭ್ಯವಿರುವ ಪ್ರಚಾರದ ಅವಧಿಯಲ್ಲಿ ಮತದಾರರನ್ನು ತಮ್ಮ ತಮ್ಮ ಪಕ್ಷಗಳತ್ತ ಸೆಳೆಯುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನದೇ ಆದ ಕಸರತ್ತು ನಡೆಸುತ್ತಿವೆ. ಈ ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಊರೂರು, ಜನರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದರೆ, ಪ್ರಭಾವಿ ಅಭ್ಯರ್ಥಿಗಳೊಂದಿಗೆ ಕಣದಲ್ಲಿರುವ ಪಕ್ಷೇತರರೂ ತಮ್ಮ ಪ್ರಯತ್ನದಲ್ಲಿದ್ದಾರೆ.
ಗುಟ್ಟು ಬಿಡದ ಮತದಾರರನ್ನು ತಮ್ಮ ತಮ್ಮ ಪಕ್ಷಗಳತ್ತ ಸೆಳೆಯುವ ನಿಟ್ಟಿನಲ್ಲಿ ಆಯಾ ಪಕ್ಷಗಳನ್ನು ಪ್ರತಿನಿಧಿಸುತ್ತಿರುವ ಉನ್ನತ ನಾಯಕರು ಸೇರಿದಂತೆ ಇತರ ಮುಖಂಡರೂ ಈ ಬಾರಿ ಕೊಡಗಿನತ್ತ ಮುಖ ಮಾಡಿದ್ದಾರೆ. ಇನ್ನು ಹಲವು ಮುಖಂಡರುಗಳೂ ಜಿಲ್ಲೆಗೆ ದೌಡಾಯಿಸುತ್ತಿದ್ದಾರೆ. ತಾ. 7 ರಂದು (ಇಂದು) ಕಾಂಗ್ರೆಸ್‍ನ ಡಿ.ಕೆ. ಶಿವಕುಮಾರ್, ಸಿ.ಎಂ. ಇಬ್ರಾಹಿಂ, ಬಿಜೆಪಿಯ ಸ್ಮøತಿ ಇರಾನಿ ಹಾಗೂ ನಟಿ ಶೃತಿ ಸೋಮವಾರಪೇಟೆಗೆ ಹಾಗೂ ತಾ 8 ರಂದು ಅಮಿತ್ ಶಾ ಮಡಿಕೇರಿಗೆ ಹಾಗೂ ಯೋಗಿ ಆದಿತ್ಯನಾಥ್ ವೀರಾಜಪೇಟೆಗೆ ಆಗಮಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಹಲವು ಪ್ರಮುಖರು ಈಗಾಗಲೇ ಜಿಲ್ಲೆಗೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿ ಹಿಂತಿರುಗಿದ್ದಾರೆ. ಬಿಜೆಪಿಯ ಪರವಾಗಿ ಪಕ್ಷದ ಪ್ರಮುಖ ರಾಜ್ಯ ಉಸ್ತುವಾರಿ ಮುರುಳೀಧರರಾವ್, ಕೇಂದ್ರ ಸಚಿವರಾದ ಮಾನ್‍ಸೂರ್ ಎಲ್. ಮಾಂಡವ್ಯ, ಡಿ.ವಿ. ಸದಾನಂದ ಗೌಡ, ಉತ್ತರಪ್ರದೇಶದ ಸಚಿವ ಮಹೇಂದ್ರ ಸಿಂಗ್ ಅವರುಗಳು ಈಗಾಗಲೇ ಜಿಲ್ಲೆಗೆ ಭೇಟಿ ನೀಡಿ ಹಿಂತಿರುಗಿದ್ದಾರೆ. ಮತ್ತೋರ್ವ ಪ್ರಮುಖ ರಾಜಸ್ಥಾನ ಕ್ರೀಡಾಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ. ನಾರಾಯಣ ಜೋಷಿ ಅವರು ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಭವಾನಿ ರೇವಣ್ಣ ಸೇರಿದಂತೆ ಪಕ್ಷದ ಸ್ಟಾರ್ ಪ್ರಚಾರಕಿ ನಟಿ ಪೂಜಾಗಾಂಧಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿ ಮರಳಿದ್ದಾರೆ.
ಇಂದು ಡಿಕೆಶಿ, ಸಿಎಂ. ಇಬ್ರಾಹಿಂ, ಸ್ಮøತಿ ಇರಾನಿ, ಶೃತಿ
ಕಾಂಗ್ರೆಸ್ ಪಕ್ಷದ ಪರವಾಗಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಪ್ರಮುಖರಾದ ಸಿ.ಎಂ. ಇಬ್ರಾಹಿಂ ಹಾಗೂ ಬಿಜೆಪಿ ಪರವಾಗಿ ಕೇಂದ್ರ ಸಚಿವೆ ಸ್ಮøತಿ ಇರಾನಿ ಹಾಗೂ ಸ್ಟಾರ್ ಪ್ರಚಾರಕಿ, ಪಕ್ಷದ ಪ್ರಮುಖರಾದ ನಟಿ ಶೃತಿ ಅವರು ತಾ. 7 ರಂದು (ಇಂದು) ಕೊಡಗಿಗೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಈ ನಾಯಕರು ಸೋಮವಾರಪೇಟೆಗೆ ಆಗಮಿಸುತ್ತಿದ್ದಾರೆ. ಸೋಮವಾರಪೇಟೆ ಯಲ್ಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸುವದ ರೊಂದಿಗೆ ಬಹಿರಂಗ ಪ್ರಚಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಹಾಗೂ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ತಿಳಿಸಿದ್ದಾರೆ.
(ಮೊದಲ ಪುಟದಿಂದ)
ನಾಳೆ ಅಮಿತ್ ಶಾ ಆಗಮನ
ತಾ. 7 ರಂದು (ಇಂದು) ಸ್ಮøತಿ ಇರಾನಿ ಹಾಗೂ ಶೃತಿ ಸೋಮವಾರಪೇಟೆಯಲ್ಲಿ ಮತಯಾಚಿಸಲಿದ್ದಾರೆ. ಇದರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಪಕ್ಷದ ‘ಚಾಣಕ್ಯ’ ಎಂದು ಗುರುತಿಸಿಕೊಂಡಿರುವ ಅಮಿತ್ ಶಾ ಅವರು ಕೊಡಗಿಗೆ ಭೇಟಿ ನೀಡುತ್ತಿರುವದು ವಿಶೇಷವಾಗಿದೆ. ತಾ. 8ರಂದು (ನಾಳೆ) ಅಮಿತ್ ಶಾ ಅವರ ಕಾರ್ಯಕ್ರಮ ನಿಗದಿಯಾಗಿದ್ದು, ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ರೋಡ್ ಶೋ ನಡೆಸುವದರೊಂದಿಗೆ ನಗರದ ಗಾಂಧಿ ಮೈದಾನದಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾ. 8 ರಂದು 3 ಗಂಟೆಗೆ ವೀರಾಜಪೇಟೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಇವರೊಂದಿಗೆ ಇನ್ನೂ ಹಲವು ನಾಯಕರು ಆಗಮಿಸುವ ಸಾಧ್ಯತೆ ಇದೆ.
ಬಿಜೆಪಿ ಪರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರ ಕಾರ್ಯಕ್ರಮದ ಬಗ್ಗೆ ಪಕ್ಷದ ಪ್ರಮುಖರು ತಾ. 6 ರ ಸಂಜೆ ಮಾಹಿತಿ ನೀಡಿದರು. ಪಕ್ಷದ ಉನ್ನತ ನಾಯಕರ ಆಗಮನದಿಂದಾಗಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳಲ್ಲಿ ಮತ್ತಷ್ಟು ಹುರುಪು ಮೂಡಿದಂತಾಗಿದೆ. ವಿವಿಧ ಪಕ್ಷದ ರಾಷ್ಟ್ರ, ರಾಜ್ಯ ಮುಖಂಡರ ದೌಡು ಒಂದೆಡೆಯಾದರೆ ಜಿಲ್ಲೆಯ ಪ್ರಮುಖರು, ಪಕ್ಷದ ಅಭ್ಯರ್ಥಿಗಳೂ ಬಿರುಸಿನ ಒಡನಾಟದಲ್ಲಿದ್ದು, ತಾ. 12ರ ಶನಿವಾರದಂದು ನಡೆಯಲಿರುವ ಮತ ಸಮರದ ಕಾವು ಇನ್ನಷ್ಟು ಹೆಚ್ಚಾಗುತ್ತಿದೆ. ಸುಸೂತ್ರ ಮತದಾನಕ್ಕಾಗಿ ಜಿಲ್ಲೆಯಲ್ಲಿ ನಿಯೋಜಿತರಾಗಿರುವ ವಿವಿಧ ಅಧಿಕಾರಿಗಳು ತಮ್ಮ ಜವಾಬ್ದಾರಿಯಂತೆ ಕ್ಷಿಪ್ರಗತಿಯಲ್ಲಿ ಕಾರ್ಯತತ್ಪರರಾಗಿದ್ದಾರೆ.