ಮಡಿಕೇರಿ, ಮೇ 6: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದೆರಡು ವರ್ಷಗಳ ಹಿಂದೆಯಷ್ಟೆ ಭಾರೀ ಸುದ್ದಿಯೊಂದಿಗೆ ಚರ್ಚೆ - ಕಾನೂನು ಹೋರಾಟಕ್ಕೆ ಗ್ರಾಸವಾಗಿದ್ದ ಕೋವಿ ಪರವಾನಗಿ ವಿಚಾರ ಇದೀಗ ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿದೆ. ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ಇರುವ ವಿಶೇಷ ವಿನಾಯಿತಿಗೆ ಸಂಬಂಧಿಸಿದಂತೆ ಈ ವಿಚಾರ ಮಗದೊಮ್ಮೆ ಚರ್ಚಾಸ್ಪದವಾಗುತ್ತಿದೆ. ಕೊಡವರು ಹಾಗೂ ಜಮ್ಮಾ ಹಿಡುವಳಿದಾರರ ಕೋವಿ ವಿನಾಯಿತಿಯನ್ನು ರದ್ದು ಪಡಿಸುವಂತೆ ಈ ಹಿಂದೆ ನ್ಯಾಯಾಲಯದಲ್ಲಿ ಕೊಡಗಿನವರೇ ಆದ ನಿವೃತ್ತ ಸೇನಾಧಿಕಾರಿ ಯಾಲದಾಳು ಕೆ. ಚೇತನ್ ಅವರು ದಾವೆ ಮಾಡಿದ್ದು, ಆ ಸಂದರ್ಭ ಈ ವಿಚಾರ ಇತ್ಯರ್ಥವಾಗಿತ್ತು.
ಇದೀಗ ಚೇತನ್ ನ್ಯಾಯಾಲಯದಲ್ಲಿ ನೀಡಲ್ಪಟ್ಟಿದ್ದ ಆಗಿನ ಉತ್ತರವನ್ನು ಆಕ್ಷೇಪಿಸಿ ಮರು ಪ್ರಶ್ನಿಸಿದ್ದು, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ಸಲ್ಲಿಸಿರುವದರಿಂದ ಕೊಡಗಿನಲ್ಲಿ ‘ಕೋವಿ’ ವಿಚಾರ ಮತ್ತೊಮ್ಮೆ ಹೊರಬಂದಂತಾಗಿದೆ. ಜನಾಂಗಕ್ಕೆ ಈ ಬಳುವಳಿ ಸುಮಾರು 200ಕ್ಕೂ ಅಧಿಕ ವರ್ಷದಿಂದ ದೊರೆತಿದೆ. ಇದನ್ನು ವೈಯಕ್ತಿಕ ಅಥವಾ ಜನಾಂಗೀಯ ದ್ವೇಷದಿಂದ ವಿರೋಧಿಸುವದು ಸರಿಯಲ್ಲ.
ಕಾನೂನು ಸಮರ : ಮೊಣ್ಣಪ್ಪ
ಕೋವಿ ವಿನಾಯಿತಿಗೆ ಸಂಬಂಧಿಸಿದಂತೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರಿಸಲು ಅಗತ್ಯ ಕಾನೂನು ಹೋರಾಟ ನಡೆಸಲಾಗುವದು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೊಣ್ಣಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಬೆಂಗಳೂರು ಕೊಡವ ಸಮಾಜ, ಕೊಡವ ಸಮಾಜಗಳ ಒಕ್ಕೂಟ, ಅಖಿಲ ಕೊಡವ ಸಮಾಜ, ಅಮ್ಮತ್ತಿ ಕೊಡವ ಸಮಾಜ, ನಾಪೋಕ್ಲು, ಪೊನ್ನಂಪೇಟೆ, ಮೈಸೂರು, ವೀರಾಜಪೇಟೆ, ಬಾಳಲೆ ಕೊಡವ ಸಮಾಜದಲ್ಲಿ ಈಗಾಗಲೇ ಈ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಸಮಾಜಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗುತ್ತಿವೆ.
ಸೂಕ್ತ ನಿರ್ಧಾರ ಕೈಗೊಳ್ಳಲು ಕೊಡವ ಸಮಾಜಗಳ ಒಕ್ಕೂಟ ಬೆಂಗಳೂರು ಕೊಡವ ಸಮಾಜಕ್ಕೆ ಅಧಿಕಾರ ನೀಡಿದೆ. ಬೆಂಗಳೂರು ಕೊಡವ ಸಮಾಜದಿಂದ ಹಿರಿಯ ವಕೀಲ ಎಂ.ಟಿ. ನಾಣಯ್ಯ ನೇತೃತ್ವದ ವಕೀಲರ ತಂಡಕ್ಕೆ ಇದರ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರೊಂದಿಗೆ ಅಖಿಲ ಕೊಡವ ಸಮಾಜವು ಮತ್ತೋರ್ವ ಹಿರಿಯ ವಕೀಲ ಸಜನ್ ಪೂವಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಇದನ್ನು ಸಮಗ್ರವಾಗಿ ಸಹಕರಿಸುವ ಭರವಸೆ ನೀಡಿರುವದಾಗಿ ಮೊಣ್ಣಪ್ಪ ಮಾಹಿತಿಯಿತ್ತಿದ್ದಾರೆ.
ಕೋವಿ ವಿನಾಯಿತಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರು ಹಲವಾರು ದಾಖಲಾತಿಗಳನ್ನು ಸಂಗ್ರಹಿಸಿದ್ದು, ಇದನ್ನು ಒದಗಿಸಿದ್ದಾರೆ. ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಸಹಕಾರ ನೀಡಲಿದ್ದಾರೆ. ಎಲ್ಲಾ ಕೊಡವ ಸಮಾಜಗಳು ಈ ಬಗ್ಗೆ ಒಂದಾಗಲಿದ್ದು, ಕೋವಿ ಹಕ್ಕು ವಿನಾಯಿತಿ ಉಳಿಸಿಕೊಳ್ಳಲು ಗಮನ ಹರಿಸಲಿರುವದಾಗಿ ತಿಳಿಸಿರುವ ಅವರು ಈ ಕುರಿತಾಗಿ ಗೌಡ ಸಮಾಜದ ಮುಖಂಡರೊಂದಿಗೂ ಚರ್ಚೆ ನಡೆಸಿರುವದಾಗಿ ವಿವರವಿತ್ತಿದ್ದಾರೆ.
ಒಂದೇ ಕಾನೂನಿನಡಿ ವಿನಾಯಿತಿ ಸಿಗಬೇಕು : ಸೋಮಣ್ಣ
ಕೋವಿ ವಿನಾಯಿತಿ ರದ್ದತಿ ಕುರಿತಾಗಿ ವೈ.ಕೆ. ಚೇತನ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಗೂ ಕೊಡಗು ಗೌಡ ಸಮಾಜ ಅಥವಾ ಗೌಡ ಸಮಾಜಗಳ ಒಕ್ಕೂಟಕ್ಕೂ ಯಾವದೇ ಸಂಬಂಧ ಇಲ್ಲ. ಇದು ಅವರ ವೈಯಕ್ತಿಕ ನೆಲೆಗಟ್ಟಿನ ವಿಚಾರವಾಗಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು ಆರ್ಟಿಕಲ್ 3 ಹಾಗೂ 4 ರಂತೆ ಕೋವಿ ವಿನಾಯಿತಿ ಕೂರ್ಗ್ ಬೈರೇಸ್ ವಿಚಾರ ಕೊಡಗಿನ ಎಲ್ಲಾ ಮೂಲ ನಿವಾಸಿಗಳಿಗೂ ಸಿಗಬೇಕು. ಇದು ಒಂದೇ ಕಾನೂನಿನ ಅಡಿಯಲ್ಲಿ ಬರಬೇಕು ಎಂಬದು ತಮ್ಮ ನಿಲುವಾಗಿದ್ದು, 2015ರಲ್ಲಿ ವೀರಾಜಪೇಟೆಯಲ್ಲಿ ನಡೆದ ಅಖಿಲ ಕೊಡವ ಸಮಾಜದ ಸಭೆಯಲ್ಲಿ ಈ ವಿಚಾರವನ್ನೂ ಗೌಡ ಸಮಾಜದ ಮೂಲಕ ಸ್ಪಷ್ಟವಾಗಿ ತಿಳಿಯಪಡಿಸಲಾಗಿತ್ತು.
ಅರ್ಜಿಗೆ ಸಂಬಂಧಿಸಿದ ವಿವಾದಾತ್ಮಕ ವಿಚಾರವನ್ನು ಸುಲಲಿತವಾಗಿ ಪರಿಹರಿಸಿಕೊಳ್ಳುವ ಸದುದ್ದೇಶದಿಂದ ಜನಾಂಗದ ಪರವಾಗಿ ಈ ಬಗ್ಗೆ ಅರ್ಜಿದಾರರಾದ ಚೇತನ್ ಅವರೊಂದಿಗೆ ಚರ್ಚಿಸಲಾಗಿದೆ. ಆದರೆ ಅವರಿಂದ ಸ್ಪಷ್ಟ ನಿಲುವು ಇನ್ನೂ ದೊರೆತಿಲ್ಲ ಎಂದು ಸೋಮಣ್ಣ ತಿಳಿಸಿದರು. ಅರ್ಜಿ ಸಲ್ಲಿಸುವ ವಿಚಾರದಲ್ಲಿ ಅವರು ಗೌಡ ಸಮಾಜ ಅಥವಾ ಗೌಡ ಸಮಾಜಗಳ ಒಕ್ಕೂಟವನ್ನು ಸಂಪರ್ಕ ಮಾಡಿಲ್ಲ ಎಂದೂ ಅವರು ಮಾಹಿತಿ ನೀಡಿದರು.