ಮಡಿಕೇರಿ, ಮೇ 6: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಳೆದ 21 ದಿನಗಳಿಂದ ನಡೆದ ಚೆರಿಯಮನೆ ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ ಸಂಭ್ರಮ ನಿನ್ನೆ ಅದ್ದೂರಿಯಾಗಿ ತೆರೆ ಕಂಡಿತು.ಮಧ್ಯಾಹ್ನ ನಡೆದ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಉದ್ಘಾಟಿಸಿದರು. ಸಂಸ್ಕøತಿ, ಪದ್ಧತಿ, ಆಚಾರ - ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಅಕಾಡೆಮಿ ಹಲವಾರು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು, ಎಲ್ಲರೂ ಸಹಕರಿಸುವಂತೆ ಕೋರಿದರು. ಅತಿಥಿಗಳಾಗಿ ಚೆರಿಯಮನೆ ಕ್ರಿಕೆಟ್ ಸಮಿತಿ ಅಧ್ಯಕ್ಷ ಡಾ. ರಾಮಚಂದ್ರ, ಯುವ ವೇದಿಕೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್ ಇದ್ದರು.

ಚೆರಿಯಮನೆ ರಚನ ತಂಡದವರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಚೆರಿಯಮನೆ ಕುಟುಂಬಸ್ಥರ ತಂಡದಿಂದ ನೃತ್ಯ, ಸೋಬಾನೆ, ಭಕ್ತಿಗೀತೆಗಳು ಮೂಡಿಬಂದರೆ, ಸುಂಟಿಕೊಪ್ಪ ಗೌಡ ಸಮಾಜ, ಅವಂದೂರು ಮಕ್ಕಳ ತಂಡ ಮಡಿಕೇರಿಯ ಹರ್ಷಿಣಿ, ಸುರಕ್ಷಾ ಮತ್ತು ತಂಡದವರಿಂದ ಮೂಡಿಬಂದ ನೃತ್ಯ ಕಾರ್ಯಕ್ರಮ ಹಾಗೂ ಕುಡೆಕಲ್ಲು ಮೋಹಿತ್ ಅವರ ಬಾಯಲ್ಲಿ ಬಾರಿಸಿದ ರಿದಂ ಬೀಟ್ಸ್ ಗಮನ ಸೆಳೆದವು. ಯುವ ವೇದಿಕೆ ಕಲಾವಿದರ ತಂಡದಿಂದ ತುಲಾ ಸಂಕ್ರಮಣ ವೈಭವ ರೂಪಕ ಮೆಚ್ಚುಗೆ ಗಳಿಸಿತು. ವೇದಿಕೆ ನಿರ್ದೇಶಕ ತೋಟಂಬೈಲು ಅನಂತ್‍ಕುಮಾರ್ ವಂದಿಸಿದರು.

ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಚೆರಿಯಮನೆ ಕುಮುದ ರಾಜ್‍ಕುಮಾರ್, ಕುಡೆಕಲ್ ಸುರಕ್ಷಾ, ತಡಿಯಪ್ಪನ ಸುಚಿತ, ಬಾರಿಕೆ ಜೀವಿತ, ಸೂರ್ತಲೆ ಬೃಂದ, ಟೆಕ್ವಾಂಡೋದಲ್ಲಿ ಕೋಚನ ರುಚಿ, ಶಿಕ್ಷಣ ಕ್ಷೇತ್ರದಲ್ಲಿ ಪೆಮ್ಮಟೆ ಪುಷ್ಪಾಂಜಲಿ ಆನಂದ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಚೆರಿಯಮನೆ ಪ್ರಶಾಂತ್, ಹಿರಿಯರಾದ ಚೆರಿಯಮನೆ ನೀಲಮ್ಮ ಬೆಳ್ಯಪ್ಪ, ಚೆರಿಯಮನೆ ಕೆಂಚಮ್ಮ ತಿಮ್ಮಯ್ಯ, ಸೂದನ ಕಮಲ ರಾಘವಯ್ಯ ಹಾಗೂ ಯುವ ವೇದಿಕೆ ಹಾಗೂ ಜನಾಂಗದ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿರುವ ಯಾಲದಾಳು ಹರೀಶ್, ಕಟ್ಟೆಮನೆ ಸೋನಾಜಿತ್, ಯಾಲದಾಳು ಮದನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಹುಮಾನ

ಸಮಾರೋಪದಲ್ಲಿ ಕ್ರಿಕೆಟ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಳೂರು ತಂಡ ಹಾಗೂ ರನ್ನರ್ ಅಪ್ ಕುದುಪಜೆ ತಂಡಗಳಿಗೆ ಸೇರಿದಂತೆ ಕಬಡ್ಡಿ, ಥ್ರೋಬಾಲ್ ವಿಜೇತ ತಂಡಗಳಿಗೆ ವೈಯಕ್ತಿಕ ಪ್ರಶಸ್ತಿ ಪಡೆದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂದನ ಕಮಲ ರಾಘವಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಂಚಿಕೆ ಕುರಿತು ಡಾ. ಚೆರಿಯಮನೆ ರಾಮಚಂದ್ರ ಮಾತನಾಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಅತಿಥಿಗಳಾಗಿ ಮಡಿಕೇರಿ ತಾಲೂಕು ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್, ದೆಹಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ದೆಹಲಿ ಕರ್ನಾಟಕ ಸಂಘದ ಜಂಟಿ ಕಾರ್ಯದರ್ಶಿ ತಡಿಯಪ್ಪನ ಬೆಳ್ಯಪ್ಪ, ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ. ಪ್ರಭಾಕರ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ರಾಖೇಶ್, ಬೆಂಗಳೂರು ಹೆಬ್ಸುಗೋಡಿ ನಗರಸಭೆ ಉಪಾಧ್ಯಕ್ಷ ರಾಜೇಂದ್ರ ಗೌಡ, ಬೆಂಗಳೂರು ಮಹಾನಗರ ಪಾಲಿಕೆ ವಿಶ್ರಾಂತ ಸಂಯುಕ್ತ ಆಯುಕ್ತ ಪಾಣತ್ತಲೆ ಪಳಂಗಪ್ಪ, ಚೆರಿಯಮನೆ ಕುಟುಂಬದ ಪಟ್ಟೆದಾರರಾದ ಕೆಂಚಪ್ಪ, ಬೆಳ್ಯಪ್ಪ ಭಾಗವಹಿಸಿದ್ದರು.

ಕುಡೆಕಲ್ ನಿಹಾಲ್ ಸಂತೋಷ್ ಪ್ರಾರ್ಥಿಸಿದರೆ, ಯುವ ವೇದಿಕೆ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ನಿರೂಪಿಸಿದರು. ಕಟ್ಟೆಮನೆ ಸೋನಾಜಿತ್, ಯಾಲದಾಳು ಮದನ್, ಪುದಿಯನೆರವನ ರಿಶಿತ್ ಮಾದಯ್ಯ ಬಹುಮಾನ ವಿತರಣಾ ಕಾರ್ಯ ನಿರ್ವಹಿಸಿದರು. ಚೆರಿಯಮನೆ ಪೆಮ್ಮಯ್ಯ ವಂದಿಸಿದರು.