ಮಡಿಕೇರಿ, ಮೇ 6: ವಿಧಾನಸಭಾ ಚುನಾವಣೆ ಸಂಬಂಧ ಮೈಕ್ರೋ ವೀಕ್ಷಕರಾಗಿ ನಿಯೋಜಿಸಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಸಾಮಾನ್ಯ ವೀಕ್ಷಕ ಟಿ. ಶ್ರೀಕಾಂತ್ ಚುನಾವಣಾ ಆಯೋಗದ ನಿರ್ದೇಶನದಂತೆ ಮೈಕ್ರೋ ವೀಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಚುನಾವಣಾ ಪ್ರಕ್ರಿಯೆಯನ್ನು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಮೈಕ್ರೋ ವೀಕ್ಷಕರ ಪಾತ್ರ ಮಹತ್ತರವಾಗಿದೆ. ಆ ನಿಟ್ಟಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಚುನಾವಣಾ ಸಾಮಾನ್ಯ ವೀಕ್ಷಕರಿಗೆ ವರದಿ ಮಾಡಬೇಕಿದೆ ಎಂದು ಟಿ. ಶ್ರೀಕಾಂತ್ ಹೇಳಿದರು.

ಚುನಾವಣಾ ದಿನದಂದು ಮತಗಟ್ಟೆಯಲ್ಲಿ ಯಾವದೇ ರೀತಿಯ ಲೋಪ ಉಂಟಾಗದಂತೆ ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆ ನಡೆಯಬೇಕು. ಆ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಸುಗಮ ಮತ್ತು ವ್ಯವಸ್ಥಿತವಾಗಿ ಚುನಾವಣಾ ಪ್ರಕ್ರಿಯೆ ನಡೆಯಬೇಕು. ಈ ಸಂಬಂಧ ಸಾಮಾನ್ಯ ವೀಕ್ಷಕರಿಗೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಮೇಶ್ ಪಿ. ಕೊನರೆಡ್ಡಿ ಮಾತನಾಡಿ, ಮತದಾನ ದಿನದಂದು ಸೂಕ್ಷ್ಮವಾಗಿ ಮತದಾನ ಪ್ರಕ್ರಿಯೆಗಳನ್ನು ಗಮನಿಸಿ ಚುನಾವಣಾ ವೀಕ್ಷಕರ ಗಮನಕ್ಕೆ ಮಾಹಿತಿ ಒದಗಿಸಬೇಕಿದೆ ಎಂದರು.

ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೊ, ಷಂಶುದ್ದೀನ್ ಅವರು ಮೈಕ್ರೋ ವೀಕ್ಷಕರ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್, ಮತಗಟ್ಟೆಯಲ್ಲಿ ಮತದಾನದಂದು ಪೂರ್ವ ಸಿದ್ಧತೆ ಮತ್ತಿತರ ಬಗ್ಗೆ ಗಮನಿಸುವದು, ಹೀಗೆ ವಿವಿಧ ಕಾರ್ಯಗಳ ಬಗ್ಗೆ ಪವರ್ ಪಾಯಿಂಟ್ ಮೂಲಕ ಮಾಹಿತಿ ನೀಡಲಾಯಿತು.

ಈ ಬಾರಿ ವಿವಿಪ್ಯಾಟ್‍ನ್ನು ಪರಿಚಯಿಸಲಾಗುತ್ತಿದ್ದು, ಮತದಾರರು, ಯಾರಿಗೆ ಮತ ಚಲಾಯಿಸಲಾಗಿದೆ ಎಂಬದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹಕಾರಿಯಾಗಿದೆ ಎಂದು ವಾಲ್ಟರ್ ಡಿಮೊಲ್ಲೊ ತಿಳಿಸಿದರು.