ಶ್ರೀಮಂಗಲ: ಕೊಡಗಿನ ಐತಿಹಾಸಿಕ ದೇವಾಲಯಗಳ ಪೈಕಿ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮದ ಚೆಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ-ವಿಷ್ಣುಮೂರ್ತಿ ಕ್ಷೇತ್ರವೂ ಒಂದು. ಸುಮಾರು 500 ವರ್ಷಗಳ ಪೌರಾಣಿಕ ಇತಿಹಾಸ ಹೊಂದಿದ್ದು, ಈ ದೇವನೆಲೆ ಇರುವ ಪ್ರದೇಶದಲ್ಲಿ ಮೊದಲು ಆದಿವಾಸಿಗಳು ವಾಸವಾಗಿದ್ದರು. ನಿತ್ಯ ಹರಿದ್ವರ್ಣದ ಭಯಾನಕ ಅರಣ್ಯ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಕಾಡು ಮೃಗಗಳ ಉಪಟಳ ಹೆಚ್ಚಾದಾಗ ಆದಿವಾಸಿಗಳು ಬಿಟ್ಟುಹೋದ ನಂತರ ‘ಚೆಪ್ಪುಡಿರ’ ಕುಟುಂಬಸ್ಥರು ನೆಲೆ ನಿಂತರು. ಆ ಪ್ರದೇಶವು ಜೌಗು ಪ್ರದೇಶ(ಕೊಲ್ಲಿ)ವಾದ್ದರಿಂದ, ‘ಚೊಪ್ಪುಡಿ ಕೊಲ್ಲಿ’ ಎಂದು ಅಂದಿನಿಂದ ಹೆಸರುವಾಸಿ ಯಾಯಿತು. ಆ ನಂತರದ ದಿನಗಳಲ್ಲಿ ಚೆಪ್ಪುಡಿರ ಕುಟುಂಬದವರು ‘ಕುಂಞಂಗಡ’ ಕುಟುಂಬದವರಿಗೆ ‘ಕುಂಞಂಗಡ ಕುಟುಂಬದವರು ಚೆಕ್ಕೇರ ಕುಟುಂಬದವರಿಗೆ ಈ ಸ್ಥಳವನ್ನು ಮಾರಾಟ ಮಾಡಿದರು. ಚೆಕ್ಕೇರ ಕುಟುಂಬಸ್ಥರು ಈ ಸ್ಥಳವನ್ನು ಖರೀದಿಸಿದ ನಂತರ ಅಲ್ಲಿರುವ ‘ಚಾಮುಂಡಿ’ ಹಾಗೂ ‘ವಿಷ್ಣು ಮೂರ್ತಿ’ ದೇವ ನೆಲೆಯ ಬಗ್ಗೆ ಅರಿತು ಕೊಂಡು ಪೂಜೆ-ಪುನಸ್ಕಾರಗಳನ್ನು ನಡೆಸುತ್ತಾ ಬರುವಾಗ ಚೆಕ್ಕೇರ ಕುಟುಂಬದ ಹಿರಿಯರ ಮೈಮೇಲೆ ಚಾಮುಂಡಿ, ವಿಷ್ಣುಮೂರ್ತಿ ದೇವರು ಬರಲಾರಂಭಿಸಿತು. ಪ್ರಾರಂಭದ ದಿನಗಳಲ್ಲಿ ಅಷ್ಟೇನು ಪ್ರಚಾರ ಪಡೆಯದೇ ಇದ್ದ ಈ ಕ್ಷೇತ್ರ ಕಳೆದ 15 ವರ್ಷಗಳಿಂದ ಚೆಕ್ಕೇರ ಕುಟುಂಬದ ಸುಬ್ಬಯ್ಯ ಎಂಬವರ ಮೈಮೇಲೆ ಚಾಮುಂಡಿ, ವಿಷ್ಣುಮೂರ್ತಿ ದೇವರು ಬರಲು ಪ್ರಾರಂಭಿಸಿದ ನಂತರ ಕ್ರಮೇಣ ಪ್ರಸಿದ್ಧಿ ಪಡೆಯತೊಡಗಿತು. ಭಕ್ತಾದಿಗಳ ಸಂಖ್ಯೆ ಸಾವಿರಗಟ್ಟಲೆ ಹೆಚ್ಚಾಗತೊಡಗಿತು. ಸುಬ್ಬಯ್ಯ ಅವರು ದೇವರ ಬಗ್ಗೆ ಕಟ್ಟುನಿಟ್ಟಾಗಿ ಪಾಲಿಸುವ ಕ್ರಮ, ನಿಯಮಗಳು, ಪೂಜೆ ಪುನಸ್ಕಾರಗಳೂ ಇದಕ್ಕೆ ಕಾರಣ. ದೇವರ ಆಶೀರ್ವಾದದಿಂದ ಭಕ್ತಾದಿಗಳ ಕಷ್ಟ ಪರಿಹಾರವಾಗುತ್ತಿರುವ ರೀತಿ ಹಾಗೂ ವಾರ್ಷಿಕ ಉತ್ಸವವನ್ನು ನಡೆಸುವ ಕ್ರಮ ದಿನದಿಂದ ದಿನಕ್ಕೆ ಭಕ್ತಾದಿಗಳಲ್ಲಿ ನಂಬಿಕೆ ಹೆಚ್ಚಾಗಲು ಕಾರಣವಾಯಿತು.

ಇಲ್ಲಿ ಎಷ್ಟೋ ವರ್ಷಗಳಿಂದ ವಾಸಿಯಾಗದ ರೋಗಗಳನ್ನು ವಾಸಿ ಮಾಡಿದ, ಭೂತ, ಪ್ರೇತಗಳ ಕಾಟ ಹಾಗೂ ಮಾಟ-ಮಂತ್ರ-ತಂತ್ರಗಳನ್ನು ನಿವಾರಿಸಿದ, ಬುದ್ದಿಮಾಂದ್ಯರನ್ನು ಸರಿಪಡಿಸಿದ, ಫಸಲು ನಷ್ಟ ಸೇರಿದಂತೆ ಹಲವು ನಷ್ಟ-ಕಷ್ಟ ಹಾಗೂ ವಿವಿಧ ತೊಂದರೆ ತಾಪತ್ರಯಗಳನ್ನು ನಿವಾರಿಸಿದ ಅನೇಕ ಉದಾಹರಣೆಗಳು ಇವೆ. ಇದರ ಪ್ರಚಾರ ಹೆಚ್ಚಾದಂತೆ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಾಗಿದೆ. ಇಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಹಾಗೂ ಅಮಾವಾಸ್ಯೆಗಳ ದಿನದಂದು ದೇವರ ದರ್ಶನಕ್ಕೆ ಭಕ್ತಾದಿಗಳು ಮುಗಿ ಬೀಳುತ್ತಾರೆ. ಶ್ರೀಮಂಗಲ ಹಾಗೂ ಟಿ. ಶೆಟ್ಟಿಗೇರಿ ಪಟ್ಟಣದಿಂದ 10 ಕಿ.ಮೀ. ದೂರವಿರುವ ದೇವಸ್ಥಾನದ ಬಹುತೇಕ ರಸ್ತೆಯು ಡಾಂಬರು ಹಾಗೂ ಕಾಂಕ್ರೀಟಿಕರಣವಾಗಿದೆ. ತಾ. 5 ರಿಂದ ದೇವರ ವಾರ್ಷಿಕ ಹಬ್ಬ ಆರಂಭಗೊಂಡಿದ್ದು, ತಾ. 7 ರವರೆಗೆ ನಡೆಯಲಿದೆ.

ಸೋಮವಾರಪೇಟೆ: ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ಹೊಸಬೀಡು, ಬಳಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮಹಾಲಕ್ಷ್ಮೀ ಅಮ್ಮನವರ ದೇವಾಲಯ ಲೋಕಾರ್ಪಣಾ ಕಾರ್ಯ ನೆರವೇರಿತು.

ನೂತನ ದೇವಾಲಯದಲ್ಲಿ ಹಲವು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ಹಾಸನದ ಎಂ.ವಿ. ಕೃಷ್ಣಮೂರ್ತಿ ನೇತೃತ್ವದಲ್ಲಿ ಮಹಾಲಕ್ಷ್ಮಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ ಮಾಡಿದರು. ನಂತರ ನಡೆದ ಧಾರ್ಮಿಕ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ್ದ ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮಿ ಮಾತನಾಡಿ, ಶರೀರದ ಅಗೋಚರ ಶಕ್ತಿ ಮತ್ತು ಚೈತನ್ಯವೇ ದೇವರು. ನಮ್ಮ ಮನಸ್ಸು ಏನು ಹೇಳುತ್ತದೆಯೋ ಅದರಂತೆ ನಡೆಯಬೇಕು ಎಂದರು.

ವೈಜ್ಞಾನಿಕ ತಳಹದಿಯಲ್ಲಿ ನಿಂತಿರುವ ನಮ್ಮ ಧರ್ಮವನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. ಪ್ರತಿಯೊಂದು ಧಾರ್ಮಿಕ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದು ಹೇಳಿದರು. ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ಪ್ರತಿಯೊಬ್ಬರು ಕಾಯಕದಲ್ಲಿ ದೇವರನ್ನು ಕಾಣಬೇಕು ಎಂದು ಅಭಿಪ್ರಾಯಿಸಿದರು.

ಗ್ರಾಮ ಮಂಡಳಿ ಅಧ್ಯಕ್ಷ ವೀರಪ್ಪ, ದಾನಿಗಳಾದ ಮಾದಾಪುರ ಲಕ್ಷ್ಮೀಜಾಲ ಎಸ್ಟೇಟ್‍ನ ವಿನಯ್, ನೇಗಳ್ಳಿ ಮಾದಪ್ಪ, ತೋಳೂರುಶೆಟ್ಟಳ್ಳಿ ವಿಶಾಲಾಕ್ಷಿ ಮತ್ತಿತರರು ಇದ್ದರು. ಇದೆ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು. ಭಕ್ತಾದಿಗಳಿಗೆ ಅನ್ನದಾನ ನಡೆಯಿತು.

ದೇವರ ವಾರ್ಷಿಕೋತ್ಸವ

*ಗೋಣಿಕೊಪ್ಪಲು: ಧನುಗಾಲ ಶ್ರೀ ಮುರುಡೇಶ್ವರ ಮತ್ತು ಬಸವೇಶ್ವರ ದೇವಸ್ಥಾನದ 28ನೇ ವಾರ್ಷಿಕೋತ್ಸವ ಮತ್ತು ಗ್ರಾಮೀಣ ಬಸವ ಜಯಂತಿ ಆಚರಣೆ ತಾ. 7 ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಸುಬ್ರಹ್ಮಣಿ ಸ್ವಾಮಿ ಪೂಜೆ, ವಿರಾಂಜನೇಯ ಸ್ವಾಮಿ ಪೂಜೆ, ಮೃತ್ಯುಂಜಯ, ನವಗ್ರಹ ಪೂಜೆ, ಮುರುಡೇಶ್ವರ, ಬಸವೇಶ್ವರ ಪೂಜೆ, ರುದ್ರಾಭಿಷೇಕ ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತ ರ್ಪಣೆಯನ್ನು ಏರ್ಪಡಿಸಲಾಗಿದೆ.

ದೈವಕೋಲ ನೇಮೋತ್ಸವ

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ನಾರ್ಗಾಣೆ ಶ್ರೀದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ತಾ. 14 ಮತ್ತು 15 ರಂದು ಧರ್ಮ ದೈವದ ನೇಮೋತ್ಸವ ನಡೆಯಲಿದೆ. ನೇಮೋತ್ಸವದ ಅಂಗವಾಗಿ ತಾ. 14 ರಂದು ರಾತ್ರಿ 8 ಗಂಟೆಗೆ ಭಂಡಾರ ಮೆರವಣಿಗೆ, ರಾತ್ರಿ 9.30 ಕ್ಕೆ ಕಲ್ಲುರ್ಟಿ ದೈವದ ಕೋಲ, 11 ಗಂಟೆಗೆ ಧರ್ಮ ದೈವದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೋಲ, ರಾತ್ರಿ 3 ಗಂಟೆಯಿಂದ ಗುಳಿಗ ಹಾಗೂ ಶ್ರೀ ಚಾಮುಂಡೇಶ್ವರಿ ಧರ್ಮದೈವದ ಕೋಲ ನಡೆಯಲಿದೆ. ತಾ. 15 ರಂದು ಬೆಳಿಗ್ಗೆ 8 ಗಂಟೆಯಿಂದ ಧರ್ಮ ದೈವದ ಹರಕೆ, ಬೇಡಿಕೆ ಗಳನ್ನು ಒಪ್ಪಿಸುವದು ಮತ್ತು ಮಧ್ಯಾಹ್ನ 12 ಗಂಟೆಯಿಂದ ಅನ್ನದಾನ ನಡೆಯಲಿದೆ ಎಂದು ರಾಜು ರೈ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.