ಮಡಿಕೇರಿ, ಮೇ 7 : ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರಕಾರ ಹಾಗೂ ಪ್ರಸಕ್ತ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿಯೇ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು, ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ವಿಶ್ವಾಸ ವ್ಯಕ್ತಪಡಿಸಿದರು. ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಬಿಜೆಪಿ ಆಳ್ವಿಕೆ ಸಂದರ್ಭ ಕೊಡಗು ಕಂಡಿರುವ ಅಭಿವೃದ್ಧಿ ಮತ್ತು ಈಗಿನ ಕಾಂಗ್ರೆಸ್ ಸರಕಾರ ಜಿಲ್ಲೆಯ ಬಗ್ಗೆ ತಳೆದಿದ್ದ ಮಲತಾಯಿ ಧೋರಣೆಯ ಕುರಿತು ಜನತೆಯಲ್ಲಿ ಅರಿವಿದೆ ಎಂದು ಬೊಟ್ಟು ಮಾಡಿದರು.

‘ಶಕ್ತಿ’:- ಟಿಕೆಟ್ ವಿಳಂಬದೊಂದಿಗೆ ಕಾಲಮಿತಿ ಕಡಿಮೆಯಾಯಿತೆ?

ಕೆಜಿಬಿ:- ಬಹುಶಃ ರಾಜ್ಯದಲ್ಲೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರವು ದೊಡ್ಡದಾಗಿದ್ದು, ಪೆರಾಜೆಯಿಂದ ಕುಟ್ಟ ತನಕ ಸುಮಾರು 170 ಕಿ.ಮೀ. ಅಂತರದಿಂದ ಕೂಡಿದೆ. ಆದರೂ ಮೊದಲಿನಿಂದಲೇ ಕ್ಷೇತ್ರದ ಜನತೆಯ ಒಡನಾಟ ಹಾಗೂ ಜನ ಸಂಪರ್ಕ ಅಭಿಯಾನದಿಂದ ಎಲ್ಲೆಡೆ ಕಾರ್ಯಕರ್ತರು ಮತದಾರರನ್ನು ತಲಪಲು ಸಾಧ್ಯವಾಗಿದೆ. ಹೀಗಾಗಿ ಗೆಲುವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಕ್ತಿ’:- ವಿರೋಧಿಗಳು ಕೆಲಸ ಮಾಡಿಲ್ಲ ಎನ್ನುತ್ತಿದ್ದಾರೆ?

ಕೆಜಿಬಿ:- ವೀರಾಜಪೇಟೆ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಬಿಜೆಪಿ ಸರಕಾರವಿದ್ದಾಗ ಅನೇಕ ರೀತಿ ಪ್ರಗತಿಯಾಗಿದೆ. ವೀರಾಜಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಸರಕಾರಿ ಕಾಲೇಜು, ಐದು ಪ್ರೌಢಶಾಲೆ, ಮೂರು ಪಿ.ಯು. ಕಾಲೇಜು, ಭಾಗಮಂಡಲದಲ್ಲಿ ಅಟಲ್‍ಜೀ ವಸತಿ ಶಾಲೆ, ವೀರಾಜಪೇಟೆಯಲ್ಲಿ ಅಲ್ಪಸಂಖ್ಯಾತರ

ವಸತಿ ಶಾಲೆ, ಪೊನ್ನಂಪೇಟೆಯಲ್ಲಿ ನ್ಯಾಯಾಲಯ ಹಾಗೂ

ನ್ಯಾಯಾಲಯ ಸಂಕೀರ್ಣ ನಿರ್ಮಾಣ, ಹಾಕಿ ಟರ್ಫ್ ಮೈದಾನ, ವೀರಾಜಪೇಟೆ ಮಿನಿ ವಿಧಾನಸೌಧ ಸೇರಿದಂತೆ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅಭಿವೃದ್ಧಿಯ ಪಟ್ಟಿ ನೀಡಿದರು.

(ಮೊದಲ ಪುಟದಿಂದ) ಅಲ್ಲದೆ, ಗ್ರಾಮೀಣ ರಸ್ತೆ, ವಿದ್ಯುತ್ ಸಂಪರ್ಕದೊಂದಿಗೆ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಮತ್ತು ಮಂಗಳೂರು ವಿವಿಯಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಹಾಗೂ ಚಿಕ್ಕ ಅಳುವಾರದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಾಯಿತು ಎಂದು ಅವರು ಉಲ್ಲೇಖಿಸಿದರು.

ಆ ಮೊದಲು ಮಡಿಕೇರಿ ಕ್ಷೇತ್ರದ ಶಾಸಕನಾಗಿದ್ದಾಗ ಶಾಶ್ವತ ಕುಡಿಯುವ ನೀರಿನ ಸಲುವಾಗಿ ನಗರಕ್ಕೆ ಕುಂಡಾಮೇಸ್ತ್ರಿ ಯೋಜನೆ, ಖಾಸಗಿ ಬಸ್ ನಿಲ್ದಾಣಕ್ಕೆ ಜಾಗ ಮಂಜೂರಾತಿ ಬಿಜೆಪಿ ಸರಕಾರದ ಸಾಧನೆಗಳೆಂದು ವಿವರಿಸಿದರು.

ಅನುದಾನ ಕೊಡುಗೆ: ಬಿಜೆಪಿ ಸರಕಾರದ ಅವಧಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಸೇರಿದಂತೆ ಇತರ ಜನಾಂಗಗಳು ಆಯೋಜಿಸುವ ಕ್ರೀಡೆಗಳಿಗೆ ವಿಶೇಷ ಅನುದಾನ ಕಲ್ಪಿಸಲು ಸಾಧ್ಯವಾಗಿದೆ ಎಂದು ನೆನಪಿಸಿದ ಅವರು, ದಸರಾ ನಾಡಹಬ್ಬಕ್ಕೂ ಧನ ಸಹಾಯ ಕಲ್ಪಿಸಲಾಗಿದೆ ಎಂದರು.

ಜಟಿಲ ಸಮಸ್ಯೆ ಇತ್ಯರ್ಥ: ಕೊಡಗಿನಲ್ಲಿ ಜಟಿಲವಾಗಿದ್ದ ಜಮ್ಮಾ ಸಮಸ್ಯೆ, ಬಾಣೆ ಜಾಗ ಗೊಂದಲ ಪರಿಹರಿಸಿದ ಹೆಗ್ಗಳಿಕೆ ಬಿಜೆಪಿ ಸರಕಾರದ್ದು ಎಂದು ಸಮರ್ಥಿಸಿದ ಬೋಪಯ್ಯ, ಭವಿಷ್ಯದಲ್ಲಿ ಸಾಕಷ್ಟು ಅಭಿವೃದ್ಧಿಯೊಂದಿಗೆ ರಾಜ್ಯದಲ್ಲಿ ಕೊಡಗನ್ನು ಮಾದರಿ ಜಿಲ್ಲೆಯಾಗಿ ರೂಪಿಸಲು ಜನತೆಯ ಆಶೀರ್ವಾದ ಕೋರುವೆ ಎಂದರು.

ಕಾಂಗ್ರೆಸ್ ಎದುರಾಳಿ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೇರಿದಂತೆ ಅನೇಕರು ಸ್ಪರ್ಧೆಯಲ್ಲಿದ್ದರೂ ಕಾಂಗ್ರೆಸ್ ಬಹುಶಃ ಬಿಜೆಪಿಗೆ ಎದುರಾಳಿಯಾದರೂ, ಗೆಲುವು ಸುಲಭ ಸಾಧ್ಯವೆಂದು ವಿಶ್ವಾಸದ ನುಡಿಯಾಡಿದರು.

ಒಗ್ಗೂಡಿ ಎದುರಿಸುವೆವು: ಬಿಜೆಪಿ ಭಿನ್ನಮತದ ಕುರಿತು ಪ್ರಶ್ನಿಸಲಾಗಿ, ಅಂತಹ ಯಾವ ಸನ್ನಿವೇಶ ಎದುರಾಗದು ಎಂದು ಪ್ರತಿಕ್ರಿಯಿಸಿದ ಬೋಪಯ್ಯ, ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಮುಖಾಂತರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಆಶಯ ನುಡಿಯಾಡಿದರು.

ಕೊಡಗಿನ ಮತದಾರರು ಅಥವಾ ಜಿಲ್ಲೆಯ ಜನತೆ ಪ್ರಬುದ್ಧರಿದ್ದು, ರಾಷ್ಟ್ರೀಯತೆ ಮತ್ತು ಬಿಜೆಪಿ ವಿಚಾರದಲ್ಲಿ ಸದಾ ಅಭಿಮಾನದಿಂದ ಸ್ಪಂದಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರಲ್ಲದೆ, ಜಾತಿ ರಾಜಕಾರಣ ಹಾಗೂ ಒಡೆದು ಆಳುವ ರಾಜಕೀಯ ನೀತಿಯನ್ನು ಒಪ್ಪಿಕೊಳ್ಳುವದಿಲ್ಲವೆಂದು ವ್ಯಾಖ್ಯಾನಿಸಿದರು.

ಸತತ ಮೂರನೇ ಬಾರಿಗೆ ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಆ ಮುನ್ನ ಮಡಿಕೇರಿ ಶಾಸಕನಾಗಿಯೂ ಆರಿಸಿರುವ ಜಿಲ್ಲೆಯ ಜನತೆಯ ಆಶೀರ್ವಾದದಿಂದ ವಿಧಾನಸಭಾ ಅಧ್ಯಕ್ಷ ಸ್ಥಾನ ಪ್ರಾಪ್ತವಾಗಿತ್ತು ಎಂದು ನೆನಪಿಸಿದ ಅವರು, ಈ ಬಾರಿ ಅತ್ಯಧಿಕ ಅಂತರದಿಂದ ಎರಡು ಕ್ಷೇತ್ರಗಳು ಬಿಜೆಪಿ ಮಡಿಲಿಗೆ ಲಭಿಸುವದಾಗಿ ಭವಿಷ್ಯ ನುಡಿದರು.