ಮಡಿಕೇರಿ, ಮೇ 7: ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದು, ಇಂದಿರಾ ನಗರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತಾ. 4.10.2016 ರಂದು ತಮ್ಮ ಮನೆಯ ಹತ್ತಿರ ಸಮುದಾಯ ಭವನದ ಮುಂದೆ ಒಬ್ಬಳೇ ಆಟವಾಡುತ್ತಿದ್ದಾಗ, ಆರೋಪಿ ಎಂ.ಕೆ. ಇಸ್ಮಾಯಿಲ್ ಎಂಬಾತ ಮಗುವಿನ ಬಳಿ ಹೋಗಿ ಮಿಠಾಯಿ ತೆಗೆದುಕೊಡುತ್ತೇನೆಂದು ಪುಸಲಾಯಿಸಿ ಆಕೆಯನ್ನು ಸಮುದಾಯ ಭವನದ ಹಿಂಭಾಗದಲ್ಲಿರುವ ಕಾಡು ಜಾಗಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಈ ವಿಷಯವು ಆಕೆಯ ತಾಯಿಗೆ ತಿಳಿದು ನಗರ ಠಾಣೆಗೆ ಪಿರ್ಯಾದನ್ನು ನೀಡಿದ್ದು, ಇದರ ಬಗ್ಗೆ ತನಿಖೆ ನಡೆಸಿ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಸಲಾಗಿದ್ದು, ಅತ್ಯಾಚಾರ ಎಸಗಿರುವದು ಸಾಬೀತಾಗಿರುವ ಕಾರಣ ನ್ಯಾಯಾಧೀಶ ಪವನೇಶ್ ಡಿ. ಅವರು ಆರೋಪಿಗೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 16 ವರ್ಷಕ್ಕಿಂತ ಕಡಿಮೆ ಪ್ರಾಯದ ಬಾಲಕಿಯ ಇಚ್ಚೆಗೆ ವಿರುದ್ಧವಾಗಿ ಬಲತ್ಕಾರ ಕೃತ್ಯ ಮಾಡಿದ ಆರೋಪಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 7500 ದಂಡವನ್ನು ಹಾಗೂ ಸದರಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಕೃತ್ಯಕ್ಕೆ ಸಮ್ಮತಿಸಲು ಅಸಮರ್ಥಳಿರುವ ಹಿನ್ನೆಲೆ ಆಕೆಯ ಮೇಲೆ ಬಲತ್ಕಾರ ಕೃತ್ಯ ಎಸಗಿದ ಆರೋಪಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 7,500 ದಂಡವನ್ನು ವಿಧಿಸಿರುತ್ತಾರೆ.
ಅಲ್ಲದೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಆರೋಪಿತರು ಸದರಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಬಲತ್ಕಾರ ಕೃತ್ಯ ಎಸಗಿದ ಆರೋಪಕ್ಕಾಗಿ 7 ವರ್ಷಗಳ ಕಠಿಣ ಸಜೆ ಮತ್ತು ರೂ. 4000 ದಂಡವನ್ನು ಆಕೆ 12 ವರ್ಷಕ್ಕಿಂತ ಸಣ್ಣ ಪ್ರಾಯದ ಮಗುವಿನ ಮೇಲೆ ಅತ್ಯಾಚಾರ ಎಸಗಿದಕ್ಕಾಗಿ ಆರೋಪಿಗೆ 10 ವರ್ಷಗಳ ಕಠಿಣ ಸಜೆ ಮತ್ತು ರೂ. 6000 ದಂಡವನ್ನು ವಿಧಿಸಲಾಗಿದೆ. ಎಲ್ಲಾ ಶಿಕ್ಷೆಗಳನ್ನು ಆರೋಪಿತರು ಏಕ ಕಾಲದಲ್ಲಿ ಅನುಭವಿಸುವಂತೆಯೂ ಮತ್ತು ಪಾವತಿಯಾಗುವ ದಂಡದ ಹಣದಲ್ಲಿ ರೂ. 20,000ವನ್ನು ಸದರಿ ಬಾಲಕಿಗೆ ಪರಿಹಾರವಾಗಿ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ವಿಚಾರಣೆ ಸಂಬಂಧ ಸರ್ಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದರು.