ಸೋಮವಾರಪೇಟೆ, ಮೇ.7: ಭಾರತೀಯ ಜನತಾ ಪಾರ್ಟಿಗೆ ರಾಜ್ಯಾದ್ಯಂತ ಉತ್ತಮ ಜನಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಸರ್ಕಾರ ರಚಿಸಲಿದೆ. ಕಾಂಗ್ರೆಸ್‍ನ ದುರಾಡಳಿತದಿಂದ ಬೇಸತ್ತಿರುವ ಜನತೆ ಒಂದು ವೇಳೆ ಜೆಡಿಎಸ್‍ಗೆ ಮತ ಹಾಕಿದರೆ ಅದು ವ್ಯರ್ಥವಾಗಲಿದೆ ಎಂದು ಬಿಜೆಪಿ ನಾಯಕಿ, ಚಲನಚಿತ್ರ ತಾರೆ ಶುೃತಿ ಹೇಳಿದರು.

ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿನವರು ದೇಶ ಭಕ್ತರು. ದೇಶ ಭಕ್ತರೆಲ್ಲರೂ ಬಿಜೆಪಿಗೆ ಓಟ್ ಮಾಡಬೇಕು. ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಹೆಸರು ಪ್ರಸ್ತಾಪಿಸುತ್ತಾರೆ. ಆದರೆ ವಿಶ್ವೇಶ್ವರಯ್ಯ ಅವರ ಹೆಸರು ಹೇಳಲು ತಡವರಿಸುತ್ತಾರೆ. ಕೊಡಗಿನವರು ಟಿಪ್ಪುವಿನ ದ್ರೋಹವನ್ನು ಎಂದಿಗೂ ಮರೆಯುವದಿಲ್ಲ ಎಂದು ಕಾರ್ಯಕರ್ತರಿಗೆ ನೆನಪಿಸುವ ಯತ್ನ ಮಾಡಿದರು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕಾಗಿ ದೇಶದ ಹಿತವನ್ನು ಒತ್ತೆಯಿಡುತ್ತಿದೆ. ಆದರೆ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಕ್ಕಾಗಿ ತಮ್ಮ ಕುಟುಂಬವನ್ನೇ ಬಿಟ್ಟು ಬಂದಿದ್ದಾರೆ. ದೇಶ ಮೊದಲು ಪಕ್ಷ ನಂತರ ಎಂಬ ಸಿದ್ದಾಂತ ಬಿಜೆಪಿಯವರದ್ದು ಎಂದರು.

ರಾಜ್ಯದಲ್ಲಿ 3800 ಅತ್ಯಾಚಾರ ಪ್ರಕರಣ ನಡೆದಿದ್ದು, 800 ದಲಿತ ಮಕ್ಕಳ ಅತ್ಯಾಚಾರವಾಗಿದೆ. ಅತ್ಯಾಚಾರ ಪ್ರಕರಣಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುವ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ರೆಗೆ ಶರಣಾಗಿದ್ದರು. ಇದನ್ನು ರಾಜ್ಯದ ಜನತೆ ಮರೆತಿಲ್ಲ. ಆದರೆ 12 ವರ್ಷದ ಒಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆದರೆ ಗಲ್ಲು ಶಿಕ್ಷೆ ವಿಧಿಸುವ ತೀರ್ಮಾನ ಮೋದಿ ಸರ್ಕಾರ ಮಾಡಿದೆ ಎಂದು ಶುೃತಿ ಹೇಳಿದರು.

ಹೆಣ್ಣಿಗೆ ಸ್ವಾಭಿಮಾನದ ಜೀವನ ಬೇಕೇ ವಿನಃ ಶಾದಿ ಭಾಗ್ಯವಲ್ಲ. ಇದಕ್ಕಾಗಿ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಜಾರಿಗೆ ತರಲು ಪ್ರಯತ್ನಿಸಿದೆ. ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಹೆಣ್ಣು ಮಕ್ಕಳು ಪೀಡೆಯಲ್ಲ ಭಾಗ್ಯಲಕ್ಷ್ಮೀ ಎಂದು ಭಾವಿಸಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಇದರೊಂದಿಗೆ ಸೈಕಲ್ ವಿತರಣೆ, ಸಂದ್ಯಾ ಸುರಕ್ಷಾ ಯೋಜನೆಗಳು ಜನರನ್ನು ತಲುಪಿವೆ ಎಂದರು.

ಮೋದಿ ಸರ್ಕಾರ ಉಜ್ವಲ ಯೋಜನೆಯಡಿ ರಾಜ್ಯದಲ್ಲಿ 9 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಉಚಿತ ಗ್ಯಾಸ್ ಸೌಲಭ್ಯ ನೀಡಿದೆ. ಎಲ್ಲಾ ವರ್ಗದ ಏಳಿಗೆಗೆ ಪ್ರಯತ್ನಿಸುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿ ರಾಜಕಾರಣ, ಒಂದು ವರ್ಗದ ತುಷ್ಟೀಕರಣಕ್ಕೆ ಮುಂದಾಗಿದೆ. ಇಂತಹ ರಾಜಕಾರಣಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಅಪ್ಪಚ್ಚು ರಂಜನ್ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದಲ್ಲಿ 200 ಕೋಟಿ ಘೋಷಿಸಿ ಕೇವಲ 41 ಕೋಟಿ ಅನುದಾನ ನೀಡಿ ಕೊಡಗಿನ ಬಗ್ಗೆ ತಾರತಮ್ಯ ನೀತಿ ಅನುಸರಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರ 4 ವರ್ಷಗಳಲ್ಲಿ 250 ಕೋಟಿ ವಿಶೇಷ ಪ್ಯಾಕೇಜ್‍ನೊಂದಿಗೆ ಒಟ್ಟು 1800 ಕೋಟಿ ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೊಡಗು ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕೊಡಗಿನಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್-ಜೆಡಿಎಸ್ ಷಡ್ಯಂತ್ರ್ಯ ರೂಪಿಸಿವೆ. ಅಧಿಕಾರಕ್ಕಾಗಿ ಹಗಲುಗನಸು ಕಾಣುತ್ತಿವೆ. ಕಾಂಗ್ರೆಸ್‍ನ ತುಷ್ಟೀಕರಣಕ್ಕೆ ಕೊನೆಯ ಮೊಳೆಯಾಗಿ ಈ ಸಮಾವೇಶ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ 2 ಕ್ಷೇತ್ರ ಬಿಜೆಪಿ ಗೆಲ್ಲಲಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಯುವ ಕಾರ್ಯಕರ್ತರು ಬಿಜೆಪಿ ಬಗ್ಗೆ ಆಕರ್ಷಿತರಾಗಿದ್ದಾರೆ ಎಂದರು.

ವೀರಶೈವ ಸಮಾಜದ ಮುಖಂಡ, ಬಿಜೆಪಿ ಸೈನಿಕ ಪ್ರಕೋಷ್ಠದ ಅಧ್ಯಕ್ಷ ಕೆ.ವಿ. ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಜಾತಿ ಒಡೆಯಲು ಯತ್ನಿಸಿದೆ. ಇದಕ್ಕೆ ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಸರ್ಕಾರ ಸೈನಿಕ ಕ್ಷೇತ್ರಕ್ಕೆ ದ್ರೋಹ ಬಗೆದಿದ್ದರೆ ಬಿಜೆಪಿಯ ಮೋದಿ ಸರ್ಕಾರ ಹೆಚ್ಚಿನ ಗೌರವ ನೀಡುವ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿ.ಎಂ. ವಿಜಯ ಮತ್ತು ಶುಂಠಿ ಭರತ್‍ಕುಮಾರ್ ಮಾತನಾಡಿ, ಎಲ್ಲಾ ಜನಾಂಗದ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ದೇಶದಲ್ಲಿ ಬಿಜೆಪಿ ಸರ್ಕಾರವಿದ್ದು ರಾಜ್ಯದಲ್ಲೂ ಅಧಿಕಾರಕ್ಕೇರಲಿದೆ. ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೊಡಗು ಹೆಚ್ಚಿನ ಪ್ರಗತಿ ಕಾಣಲಿದೆ ಎಂದರು.

ಕೇಂದ್ರ ಸಚಿವೆ ಸ್ಮøತಿ ಇರಾನಿ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಜೆ.ಕೆ. ಮುತ್ತಮ್ಮ, ಕೇರಳ ಬಿಜೆಪಿ ಮುಖಂಡ ರಂಜಿತ್, ರಾಜಸ್ಥಾನದ ಧರ್ಮ ನಾರಾಯಣ ಜೋಷಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ, ಜಲಜಾ ಶೇಖರ್, ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಕುಮಾರಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರಾದ ನಳಿನಿ ಗಣೇಶ್, ಎಸ್.ಸಿ. ಘಟಕ ಉಪಾಧ್ಯಕ್ಷ ರಾಮಕೃಷ್ಣ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.