ಸೋಮವಾರಪೇಟೆ, ಮೇ 7: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರು ತ್ತಿದ್ದಂತೆ ಪ್ರಥಮ ಕ್ಯಾಬಿನೆಟ್‍ನಲ್ಲೇ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವದು ಎಂದು ಕೇಂದ್ರ ಸಚಿವೆ ಸ್ಮøತಿ ಇರಾನಿ ಹೇಳಿದರು.

ಭಾರತೀಯ ಜನತಾ ಪಕ್ಷದ ವತಿಯಿಂದ ಇಲ್ಲಿನ ಜೇಸಿ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸಿದ್ದರಾಮಯ್ಯ ಸರ್ಕಾರವನ್ನು ತಮ್ಮ ಮಾತಿನುದ್ದಕ್ಕೂ ಸಿದ್ದರುಪಯ್ಯಾ ಸರ್ಕಾರ ಎಂದೇ ಸಂಬೋಧಿಸಿದ ಸ್ಮøತಿ ಇರಾನಿ ಅವರು, ಇಂತಹ ಸರ್ಕಾರ ಇರುವವರೆಗೆ ರಾಜ್ಯ ಅಭಿವೃದ್ಧಿ ಸಾಧಿಸಲು ಅಸಾಧ್ಯ ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ್ದಾರೆ; ಬೇಗ ಮುಗಿಸಿ ಎಂದು ವಾಚ್ ತೋರಿಸಿದ್ದಾರೆ. ಒಂದು ವೇಳೆ ಆ ಸ್ಥಳದಲ್ಲಿ ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಇದ್ದಿದ್ದರೆ ಖಂಡಿತವಾಗಿಯೂ ಸರಿಯಾಗಿಯೇ ಅರ್ಥ ಮಾಡಿಸುತ್ತಿದ್ದರು ಎಂದು ಕುಟುಕಿದರು.

ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಅಭಿವೃದ್ಧಿಯ ಚಿಂತನೆಯಿಲ್ಲ. ಜನನಿ ಜನ್ಮ ಭೂಮಿಯ ಮೇಲೆ ಕಾಂಗ್ರೆಸ್ಸಿಗೆ ಪ್ರೀತಿ ಮತ್ತು ಗೌರವ ಇಲ್ಲ. ಬಡವರ ವಿಕಾಸದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸಹಿಸಲ್ಲ ಎಂದು ವಾಗ್ಧಾಳಿ ನಡೆಸಿದರು.

ಇದೀಗ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಕ್ಷೇತ್ರದಲ್ಲಿ ಈ ಹಿಂದೆ ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಪ್ರತಿನಿಧಿಸಿದ್ದರು. ಈಗ ರಾಹುಲ್ ಗಾಂಧಿ ಎಂ.ಪಿ. ಆಗಿದ್ದಾರೆ. ಆದರೆ ಅಮೇಥಿಯಲ್ಲಿ ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಪಾಸ್‍ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸಲು ಮೋದಿ ಸರ್ಕಾರ ಬರಬೇಕಾಯಿತು. ಇಂತಹ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಕಾಂಗ್ರೆಸ್ ಪರ ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ದೇಶದ ಬಡವರ ಉದ್ದಾರದ ಬಗ್ಗೆ ಮಾತನಾಡಿದರೆ, 7 ಕೋಟಿ ಶೌಚಾಲಯಗಳನ್ನು ನಿರ್ಮಿಸಿದರೆ, 3.50 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ನೀಡಿದರೆ, ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ, 31 ಕೋಟಿ ಜನ್‍ಧನ್ ಖಾತೆ ತೆರೆಸಿದರೆ, ಮುದ್ರಾ ಯೋಜನೆಯಡಿ ಯುವ ಜನಾಂಗಕ್ಕೆ ಜಾಮೀನು ರಹಿತ ಸಾಲ ನೀಡಿದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಮಸ್ಯೆಯಾಗುತ್ತದೆ. ಇದು ಭಾರತದ ಸಮಸ್ಯೆಯೂ ಆಗಿದೆ ಎಂದರು.

ದೇಶದ ವಿಕಾಸಕ್ಕೆ ಶ್ರಮಿಸುತ್ತಿರುವ ಮೋದಿ ಕೈಯನ್ನು ಬಲಪಡಿಸಲು ಬಿಜೆಪಿಯನ್ನು ಬೆಂಬಲಿಸಬೇಕು. ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿಯನ್ನು ತಲಪಿಸಲು ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.