ಮಡಿಕೇರಿ, ಮೇ 7: ಬೈಕ್ ಅಪಘಾತಕ್ಕೀಡಾಗಿ ಕೊಡಗು ಜಿಲ್ಲೆಯ ಯುವಕನೋರ್ವ ಬೆಂಗಳೂರಿನಲ್ಲಿ ದುರ್ಮರಣಗೊಂಡಿರುವ ಘಟನೆ ವರದಿಯಾಗಿದೆ. ಮೂಲತಃ ಟಿ. ಶೆಟ್ಟಿಗೇರಿ ಈಸ್ಟ್ನೆಮ್ಮಲೆಯ ನಿವಾಸಿ, ಮಾಜಿ ಯೋಧ ಬೆಂಗಳೂರಿನಲ್ಲಿ ನೆಲೆಸಿದ್ದ ಚೊಟ್ಟೆಯಂಡಮಾಡ ಗಣಪತಿ (ಗಣೇಶ್) ಹಾಗೂ ಶೀಲಾ (ತಾಮನೆ ಚೊಟ್ಟಂಗಡ, ಬಿರುನಾಣಿ) ದಂಪತಿಯ ದ್ವಿತೀಯ ಪುತ್ರ ನಿತಿನ್ (29) ಮೃತ ಯುವಕ.
ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ನಿತಿನ್ (29) ಚಾಲಿಸುತ್ತಿದ್ದ ಬೈಕ್ ಬಾಣಸವಾಡಿ ರಿಂಗ್ ರಸ್ತೆಯ ಬಳಿ ಇಂದು ಬೆಳಗ್ಗಿನ ಜಾವ ಅವಘಡಕ್ಕೀಡಾಗಿದ್ದು, ವಿದ್ಯುತ್ ಪೋಲ್ ತಲೆಗೆ ಅಪ್ಪಳಿಸಿ ಅವರು ಅಸುನೀಗಿದ್ದಾರೆ. ನಿತಿನ್ ಈ ಹಿಂದೆ ಯುಎಸ್ಎಯಲ್ಲಿದ್ದು, ಕಳೆದ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಹಿಂತಿರುಗಿ ಇಲ್ಲಿ ಉದ್ಯೋಗಕ್ಕೆ ಸೇರಿದ್ದರು. ಮೃತ ನಿತಿನ್ನ ಹಿರಿಯ ಸಹೋದರ ಚೇತನ್ ಕೂಡ ಯುಎಸ್ಎಯಲ್ಲಿ ಉದ್ಯೋಗದಲ್ಲಿದ್ದಾರೆ.
ಚೇತನ್ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ ಬಳಿಕವಷ್ಟೆ ಅಂತ್ಯಸಂಸ್ಕಾರ ನೆರವೇರಲಿದೆ. ಮೃತದೇಹವನ್ನು ಹೆಬ್ಬಾಳ ಸನಿಹದ ಬ್ಯಾಬ್ಟಿಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಸಹೋದರ ಚೇತನ್ ಬುಧವಾರದಂದು ಬೆಂಗಳೂರು ತಲಪುವ ನಿರೀಕ್ಷೆಯಿದೆ. ಜಿಲ್ಲೆಯ ಯುವಕರು ಬೈಕ್ ಅವಘಡದಲ್ಲಿ ಮೃತ ಪಡುತ್ತಿರುವ ಕುರಿತು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.