ಮಡಿಕೇರಿ, ಮೇ 7: ಸಂಕಷ್ಟದಲ್ಲಿರುವ ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತೆ ಬ್ಯಾಂಕ್ಗಳು ಬಲವಂತವಾಗಿ ಸಾಲ ವಸೂಲಾತಿಯಲ್ಲಿ ತೊಡಗಿದ್ದು ಬೆಳೆಗಾರರ ಸಮಸ್ಯೆಗಳ ಬಗ್ಗೆ ಯಾವದೇ ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಅಧಿಕಾರಿಗಳು ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬೆಳೆಗಾರ ಸಂಘಟನೆಗಳು ಆರೋಪಿಸಿವೆ. ತಾ. 10 ರೊಳಗಾಗಿ ಬೆಳೆಗಾರರಿಂದ ಸಾಲ ವಸೂಲಾತಿ ಸಂಬಂಧ ರಾಜಕಾರಣಿಗಳು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸದೇ ಇದ್ದಲ್ಲಿ ಬೆಳೆಗಾರರು ನೋಟಾ ಮತಕ್ಕೆ ಮುಂದಾಗಬೇಕಾದೀತು ಎಂದೂ ಸಂಘಟನೆಗಳ ಪ್ರಮುಖರು ಎಚ್ಚರಿಸಿದ್ದಾರೆ.
ನಗರದಲ್ಲಿ ಸೋಮವಾರ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಬೆಳೆಗಾರರ ಒಕ್ಕೂಟ, ಕೊಡಗು ಬೆಳೆಗಾರರ ಒಕ್ಕೂಟ, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಸೋಮವಾರಪೇಟೆ ಬೆಳೆಗಾರರ ಸಂಘ, ಶನಿವಾರಸಂತೆ ಬೆಳೆಗಾರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಜಂಟಿ ಸಭೆಯಲ್ಲಿ ಬ್ಯಾಂಕ್ಗಳು ಬೆಳೆಗಾರರಿಂದ ಬಲವಂತವಾಗಿ ಸಾಲ ವಸೂಲಾತಿ ನಡೆಸುತ್ತಿರುವದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಪ್ರಸ್ತುತ ಕಾಫಿ ಉದ್ಯಮ ಸಂಕಷ್ಟದ ಸ್ಥಿತಿಯಲ್ಲಿದ್ದು, ರೋಬಸ್ಟಾ ಕಾಫಿಗೆ 15,000 ಮತ್ತು ಅರೇಬಿಕಾ 30,000 ರೂ. ಎಕ್ರೆಗೆ ನಷ್ಟವಾಗುತ್ತಿದೆ. ಇಂಥ ದುಸ್ಥಿತಿಯಲ್ಲಿ ರಾಜಕಾರಣಿಗಳು ಬೆಳೆಗಾರರಿಗೆ ಸ್ಪಂದಿಸಬೇಕಾಗಿದೆ. ಆದರೆ, ಯಾವದೇ ಸಮಸ್ಯೆಯನ್ನು ಆಲಿಸುತ್ತಿಲ್ಲ. ಚುನಾವಣೆಯಲ್ಲಿ ಗೆದ್ದರೆ ಬೆಳೆಗಾರರ ಸಮಸ್ಯೆ ಪರಿಹರಿಸುತ್ತೇವೆ ಎಂದು ಬಾಯಿ ಮಾತಿನ ಭರವಸೆ ನೀಡುತ್ತಿರುವ ರಾಜಕಾರಣಿಗಳು ಸ್ಪಷ್ಟವಾಗಿ ಸಮಸ್ಯೆ ಪರಿಹರಿಸುವ ಬಗ್ಗೆ ಹೇಳದೇ ನುಣುಚಿಕೊಳ್ಳುತ್ತಿದ್ದಾರೆ. ಈ ದುಸ್ಥಿತಿಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸದೇ ಇದ್ದಲ್ಲಿ ಮತದಾನದ ಸಂದರ್ಭ ನೋಟಾ ಮತ ಚಲಾಯಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. ತಾ. 8ರಂದು (ಇಂದು) ಮಡಿಕೇರಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಿ ಬೆಳೆಗಾರರ ಸಮಸ್ಯೆ ಪರಿಹಾರ ಸಂಬಂಧಿತ ಮನವಿ ಸಲ್ಲಿಸಲೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕಾರ್ಯಪ್ಪ, ನಿರ್ದೇಶಕ ಮೋಹನ್ ದಾಸ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಕೆ.ವಿಶ್ವನಾಥ್, ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ, ತಾಂತ್ರಿಕ ಸಲಹೆಗಾರ ಶೆರಿ ಸುಬ್ಬಯ್ಯ, ಖಚಾಂಚಿ ವಿಜಯ್ ನಂಜಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟದ ಸದಸ್ಯ ಮಂಜೀರ ಬೋಸ್, ಸತೀಶ್ ದೇವಯ್ಯ, ಸೋಮವಾರಪೇಟೆ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ದಿನೇಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.