ಬೆಂಗಳೂರು, ಮೇ 7: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಈ ಬಾರಿಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಕಳೆದ ಬಾರಿ ಶೇ. 77 ಫಲಿತಾಂಶದೊಂದಿಗೆ 9ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿ ಶೇ.80.68 ಫಲಿತಾಂಶದೊಂದಿಗೆ 18ನೇ ಸ್ಥಾನಕ್ಕೆ ಕುಸಿದಿದೆ.
ಒಟ್ಟು ಪರೀಕ್ಷೆ ಬರೆದಿದ್ದ 6464 ಮಕ್ಕಳಲ್ಲಿ 5215 ಮಕ್ಕಳು ಉತ್ತೀರ್ಣರಾಗಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ಪರೀಕ್ಷೆ ಬರೆದಿದ್ದ 936 ಬಾಲಕರಲ್ಲಿ 724 ಮಂದಿ ತೇರ್ಗಡೆ ಹೊಂದಿದ್ದಾರೆ. 972 ಬಾಲಕಿಯರಲ್ಲಿ 825 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 81.18 ಫಲಿತಾಂಶ ಬಂದಿದೆ. ವೀರಾಜಪೇಟೆ ತಾಲೂಕಿನಲ್ಲಿ 984 ಬಾಲಕರು ಪರೀಕ್ಷೆ ಬರೆದಿದ್ದರು. ಇವರಲ್ಲಿ 810 ಮಂದಿ ಉತ್ತೀರ್ಣರಾಗಿದ್ದಾರೆ. 1011 ಬಾಲಕಿಯರಲ್ಲಿ 885 ಮಂದಿ ತೇರ್ಗಡೆ ಹೊಂದಿದ್ದು, ಶೇ. 84.96 ಫಲಿತಾಂಶ ಬಂದಿದೆ. ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಪರೀಕ್ಷೆ ಬರೆದಿದ್ದ 1204 ಮಂದಿ ಬಾಲಕರಲ್ಲಿ 881 ಮಂದಿ ಉತ್ತೀರ್ಣರಾಗಿದ್ದು, 1357 ಬಾಲಕಿಯರಲ್ಲಿ 1090 ಮಂದಿ ಉತ್ತೀರ್ಣರಾಗುವ ಮೂಲಕ ಶೇ.76.96 ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು 3124 ಬಾಲಕರು ಪರೀಕ್ಷೆ ಬರೆದಿದ್ದು, 2415 ಮಂದಿ ತೇರ್ಗಡೆ ಹೊಂದಿದ್ದಾರೆ.
3340 ಬಾಲಕಿಯರು ಪರೀಕ್ಷೆ ಬರೆದಿದ್ದು, 2800 ಮಂದಿ ಉತ್ತೀರ್ಣರಾಗಿದ್ದಾರೆ. 4 ಸರ್ಕಾರಿ ಶಾಲೆಗಳು ಹಾಗೂ 15 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 19 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಫಲಿತಾಂಶ ಕಡಿಮೆ ಬಂದ ಕಾರಣ ಹಾಗೂ ಇಂಗ್ಲೀಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ಅಂಕ ಕಡಿಮೆ ಆದ್ದರಿಂದ ಜಿಲ್ಲಾವಾರು ಫಲಿತಾಂಶದಲ್ಲಿ ಇಳಿಕೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ತೃತೀಯ ಸ್ಥಾನ ಗಳಿಸಿದೆ. ಯಾದಗಿರಿ ಕೊನೆಯ ಸ್ಥಾನಕ್ಕಿಳಿದಿದೆ. - ಬಿ.ಜಿ. ರವಿಕುಮಾರ್