ಮಡಿಕೇರಿ, ಮೇ 7 : ಈ ಬಾರಿಯ ವಿಧಾನಸಭಾ ಚುಣಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರನ್ನು ಬೆಂಬಲಿಸುವದಾಗಿ ತಿಳಿಸಿರುವ ಕೊಡಗು ಪ್ರಗತಿಪರ ಗೆಳೆÉಯರ ಬಳಗ, ಜೆಡಿಎಸ್ ಅಭ್ಯರ್ಥಿಗೆ ಮತ ನೀಡದಂತೆ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖರು, ಸಾಮಾಜಿಕ ಕಳಕಳಿ ಹೊಂದಿರುವ ಕೆ.ಪಿ.ಚಂದ್ರಕಲಾ ಅವರನ್ನು ನಾವು ಬೆಂಬಲಿಸುತ್ತಿ ದ್ದೇವೆಯೇ ಹೊರತು ಕಾಂಗ್ರೆಸ್ ಪಕ್ಷವನ್ನಲ್ಲವೆಂದು ಸ್ಪಷ್ಟಪಡಿಸಿದರು.
ವಕೀಲ ಕೆ.ಆರ್.ವಿದ್ಯಾಧರ್ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಯಾವದೇ ಪ್ರಗತಿಪರರ ಹೋರಾಟಗಳಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪಾಲ್ಗೊಂಡಿಲ್ಲ. ಆದರೆ, ಕೆ.ಪಿ.ಚಂದ್ರಕಲಾ ಅವರು ಜನಪರ ಹೋರಾಟಗಳು ನಡೆದಾಗ ಕೈಜೋಡಿಸಿದ್ದಾರೆ. ದೇವಟ್ ಪರಂಬು ವಿಚಾರದಲ್ಲಿ ಇತಿಹಾಸವನ್ನು ತಿರುಚಿ ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆದಾಗ ಇದರ ವಿರುದ್ಧ ಚಂದ್ರಕಲಾ ಅವರು ಧ್ವನಿ ಎತ್ತಿದ್ದಾರೆ ಎಂದರು.
ವಕೀಲ ಕುಂಞÂ ಅಬ್ದುಲ್ಲ ಮಾತನಾಡಿ, ಜೆಡಿಎಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೇವಟ್ ಪರಂಬು, ಟಿಪ್ಪು ಜಯಂತಿ, ಕಸ್ತೂರಿ ರಂಗನ್ ವರದಿ ಸೇರಿದಂತೆ ಇತರ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಜನತೆ ಸಂದಿಗ್ಧತೆಯಲ್ಲಿ ಇದ್ದಾಗ ಕಾಣಿಸಿಕೊಳ್ಳದ ಜೀವಿಜಯ ಅವರು, ಚುನಾವಣೆ ಬಂದಾಗ ಪ್ರತ್ಯಕ್ಷರಾಗಿದ್ದಾರೆ ಎಂದು ಟೀಕಿಸಿದರು. ಸಮಾಜ ಮುಖಿಯಾಗಿರುವ ಕೆ.ಪಿ. ಚಂದ್ರಕಲಾ ಅವರನ್ನು ಬೆಂಬಲಿಸು ವಂತೆ ಮನವಿ ಮಾಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲತೆಯನ್ನು ಕಂಡಿದ್ದು, ದೇಶದಲ್ಲಿ ಭಯದ ವಾತಾವರಣವಿದೆ ಎಂದು ಆರೋಪಿಸಿದರು. ರಾಜ್ಯದ 219 ಕ್ಷೇತ್ರಗಳಲ್ಲಿ ಸಿಪಿಐ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದೆ. ಕೊಡಗಿನಲ್ಲಿ ಜನ ಬದಲಾವಣೆಯನ್ನು ಬಯಸುತ್ತಿದ್ದು, ನಮ್ಮ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದರು.
ವೆಲ್‍ಫೇರ್ ಫಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಬಷೀರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಗತಿಪರರಾಗಿ ಕೆಲಸ ಮಾಡಿದ್ದು, ಬೆಂಬಲಿಸುವದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಹೊಸೂರು ಗಿರಿ ಹಾಗೂ ಪ್ರಗತಿಪರ ಗೆಳೆಯರ ಬಳಗದ ಅಂತೋಣಿ ಉಪಸ್ಥಿತರಿದ್ದರು.