ಸೋಮವಾರ ಪೇಟೆ, ಮೇ.7: ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರ ಪ್ರಚಾರ ನಡೆಸಲು ಸೋಮವಾರಪೇಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಹೆಲಿಪ್ಯಾಡ್‍ನಿಂದ ಕಾರಿನಲ್ಲಿ ಪಕ್ಷದ ಕಚೇರಿಗೆ ತೆರಳುವ ಮಾರ್ಗ ಮಧ್ಯೆ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ ಘಟನೆ ನಡೆಯಿತು. ವಿವೇಕಾನಂದ ವೃತ್ತದಿಂದ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ರೋಡ್ ಶೋ ತೆರಳುತ್ತಿದ್ದ ಸಂದರ್ಭ ಮೆರವಣಿಗೆ ಇನ್ನೇನು ಕೊನೆಯಾಗಬೇಕು ಎನ್ನುವಷ್ಟರಲ್ಲಿ, ಇಲ್ಲಿನ ಅಮ್ಮಣ್ಣ ಗ್ಯಾರೇಜ್ ಬಳಿ ಡಿ.ಕೆ. ಶಿವಕುಮಾರ್ ಅವರ ಕಾರು ಆಗಮಿಸಿತು.
ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಆಗಮಿಸಿ ತೆರಳುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸುತ್ತಿದ್ದ ಸಂದರ್ಭವೇ ಕಾರಿನ ಗ್ಲಾಸ್ ಇಳಿಸಿದ ಡಿ.ಕೆ.ಶಿವಕುಮಾರ್ ಅವರು, ನಗುಮುಖದಿಂದಲೇ ಬಿಜೆಪಿಯವರತ್ತ ಕೈ ಬೀಸಿ ತೆರಳಿದರು.