ಮಡಿಕೇರಿ, ಮೇ 7: ವಿಧಾನಸಭಾ ಚುನಾವಣೆಗೆ ಇನ್ನೂ 5 ದಿನ ಮಾತ್ರ ಬಾಕಿಯಿದ್ದು, ಚುನಾವಣೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ. ಮತದಾರರು ಅವಕಾಶ ವಂಚಿತರಾಗದೆ ತಮ್ಮ ಹಕ್ಕು ಚಲಾಯಿ ಸುವಂತೆ ಅವರು ಕರೆ ನೀಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭಾ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಮೈಕ್ರೋ ವೀಕ್ಷಕರ ತರಬೇತಿ ಕಾರ್ಯ ಕ್ರಮ ಪೂರ್ಣಗೊಂಡಿದ್ದು, ಮಸ್ಟರಿಂಗ್ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ತಾ. 11 ರಂದು ಮಸ್ಟರಿಂಗ್ ಕಾರ್ಯ ನಡೆಯಲಿದೆ. ಹಾಗೆಯೇ ಡಿಮಸ್ಟರಿಂಗ್ ಕಾರ್ಯವು ತಾ. 12 ರಂದು ನಡೆಯಲಿದೆ ಎಂದು ವಿವರಿಸಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆಗಳಿಗೆ ತೆರಳಲು ಬಸ್ ಮಾರ್ಗ ನಿಗದಿಪಡಿಸಲಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ 90 ಮಾರ್ಗಗಳನ್ನು ಗುರುತಿಸಲಾಗಿದೆ. 43 ಕೆ.ಎಸ್.ಅರ್.ಟಿ.ಸಿ ಬಸ್, 9 ಮಿನಿ ಬಸ್, 16 ಮ್ಯಾಕ್ಸಿ ಕ್ಯಾಬ್, 36 ಜೀಪು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 117 ಮಾರ್ಗಗಳನ್ನು ಗುರುತಿಸಲಾಗಿದ್ದು 41 ಕೆ.ಎಸ್.ಅರ್.ಟಿ.ಸಿ ಬಸ್, 30 ಮಿನಿ ಬಸ್, 17 ಮ್ಯಾಕ್ಸಿ ಕ್ಯಾಬ್, 54 ಜೀಪು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 84 ಕೆ.ಎಸ್. ಅರ್.ಟಿ.ಸಿ ಬಸ್, 39 ಮಿನಿ ಬಸ್, 33 ಮ್ಯಾಕ್ಸಿ ಕ್ಯಾಬ್, 88 ಜೀಪು ವ್ಯವಸ್ಥೆ ಮಾಡಲಾಗಿದೆ ಒಟ್ಟು 207 ಮಾರ್ಗಗಳನ್ನು ಒಳಗೊಂಡಿದೆ ಎಂದ ಅವರು, ತಾ. 12 ರಂದು ಮತದಾನ ಮುಕ್ತಾಯಗೊಂಡು ಡಿಮಸ್ಟರಿಂಗ್ ಕಾರ್ಯಕ್ರಮವನ್ನು ಸಂಬಂಧಿಸಿದ ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಮುಗಿಸಿದ ನಂತರ ಎರಡು ಕ್ಷೇತ್ರದ ಮತಯಂತ್ರಗಳನ್ನು ನಗರದ ಸಂತ ಜೋಸೆಫರ ಶಾಲೆಯಲ್ಲಿ ಕ್ಷೇತ್ರವಾರು ಸಿದ್ದಪಡಿಸಿರುವ ಭದ್ರತಾ ಕೊಠಡಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ಇಡಲಾಗುವದು. ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು ಜಿಲ್ಲಾ ಕೇಂದ್ರದ ಸಂತ ಜೋಸೆಫರ ಕಾನ್ವೆಂಟ್‍ನಲ್ಲಿ ನಡೆಸಲಾಗುತ್ತದೆ ಎಂದು ಪಿ.ಐ.ಶ್ರೀವಿದ್ಯಾ ವಿವರಿಸಿದರು.
ಮತದಾರರು ತಮ್ಮ ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಹಾಗೂ ಇನ್ನಿತರ ವಿವರಗಳನ್ನು 9731979899 ಸಂಖ್ಯೆಗೆ ಎಸ್.ಎಂ.ಎಸ್ (SಒS) ಏಂಇPIಅ <sಠಿಚಿಛಿe> ಗುರುತಿನ ಚೀಟಿ ಸಂಖ್ಯೆ ಟೈಪ್ ಮಾಡುವದರ ಮೂಲಕ ತಿಳಿಯಬಹುದು ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತದಾರರಿಗೆ ಮತದಾರರ ಚೀಟಿ(ಸ್ಲಿಪ್) ವಿತರಿಸಲಾಗುತ್ತಿದೆ. ಮತದಾರರ ಸ್ಲಿಪ್‍ನಲ್ಲಿ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಹೆಸರು, ಮತದಾರರ ಭಾವಚಿತ್ರ, ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಇತರೆ ವಿವರ ಒಳಗೊಂಡಿ ರುತ್ತದೆ. ಇದರಿಂದ ಮತದಾರರಿಗೆ ಸುಲಭವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಮೊದಲ ಬಾರಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಕುಟುಂಬಗಳಿಗೆ ಒಂದು ವೋಟರ್ ಗೈಡ್‍ನ್ನು ಬೂತ್ ಮಟ್ಟದ ಅಧಿಕಾರಿಗಳಿಂದ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ವೋಟರ್ ಗೈಡ್ ನಲ್ಲಿ ಮತದಾರರಿಗೆ ಮತದಾನದ ಮಾಹಿತಿ, ಮತದಾನ ಕೇಂದ್ರದಲ್ಲಿರುವ ಸೌಲಭ್ಯಗಳ ವಿವರ, ಇವಿಎಂ ಮತ್ತು ವಿವಿಪ್ಯಾಟ್ ಬಳಸಿ ಮತ ಚಲಾಯಿಸುವದು; ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಇಲ್ಲದೇ ಇದ್ದರೆ 12 ಬಗೆಯ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತದಾನ ಮಾಡುವ ಬಗ್ಗೆ ಮಾಹಿತಿ ಇರುತ್ತದೆ ಎಂದು ತಿಳಿಸಿದರು.
ನಿಮ್ಮ ಹಕ್ಕು ಬೆರಳ ತುದಿಗಳಲ್ಲಿದೆ!
ಚುನಾವಣಾ ಆ್ಯಪ್‍ನಲ್ಲಿ ಮತಕೇಂದ್ರ ಕುರಿತು ಮಾರ್ಗದರ್ಶನ ನೀಡುತ್ತದೆ, ಎಪಿಕ್ ಸಂಖ್ಯೆ ಬಳಸಿ ಮಾಹಿತಿ ಹುಡುಕಲು, ಮತಗಟ್ಟೆ ಕಂಡುಕೊಳ್ಳಲು, ವ್ಹೀಲ್‍ಚೇರ್ ಬುಕ್ ಮಾಡಲು ಮತ್ತಿತರ ಮಾಹಿತಿಗೆ ನೆರವಾಗುತ್ತದೆ. ಚುನಾವಣಾ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಮತದಾರರಿಗೆ ವಿವರ ನೀಡಿದರು.
ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಹಾಗೂ ಇನ್ನಿತರ ವಿವರಗಳನ್ನು ತಿಳಿಯಲು ಗುರುತಿನ ಚೀಟಿಯ ಸಂಖ್ಯೆಯನ್ನು 9731979899 ಸಂಖ್ಯೆಗೆ ಎಸ್.ಎಂ.ಎಸ್ (SಒS) ಮುಖಾಂತರ ಕಳುಹಿಸಿ ಏಂಇPIಅ<sಠಿಚಿಛಿe> ಗುರುತಿನ ಚೀಟಿ ಸಂಖ್ಯೆ ನಮೂದಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
18 ವರ್ಷ ಪೂರ್ಣಗೊಂಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಪ್ರತಿಯೊಬ್ಬ ಮತದಾರರು ಮತದಾನ ಮಾಡು ವಂತಾಗಬೇಕು ತಾ. 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಘಂಟೆ ವರೆಗೆ ಮತದಾನ ನಡೆಯಲಿದೆ. ಮತದಾನ ದಿನದಂದು ಪ್ರತಿ 2 ಗಂಟೆಗೊಮ್ಮೆ ಶೇಕಡವಾರು ಮತದಾನದ ಮಾಹಿತಿ ದೊರೆಯಲಿದೆ ಎಂದು ಇದೇ ಸಂದರ್ಭ ಹೇಳಿದರು.
ಪ್ರಸಕ್ತ ವಿಧಾನಸಭಾ ಚುನಾವಣೆ ಸಂಬಂಧ ಮತದಾನ ನಡೆಯುವ ದಿನದ 48 ಗಂಟೆ ಅವಧಿಯಲ್ಲಿ (ಮೇ 11 ಮತ್ತು 12 ರಂದು) ಮುದ್ರಣ ಮಾಧ್ಯಮದಲ್ಲಿ ಜಾಹೀರಾತನ್ನು ಪ್ರಕಟಿಸಲು ಜಿಲ್ಲಾ ಮಟ್ಟದ ಎಂಸಿಎಂಸಿ ಯಿಂದ ಪೂರ್ವಾನುಮತಿ ಪಡೆಯಬೇಕಿದೆ ಎಂದು ಶ್ರೀವಿದ್ಯಾ ಕೋರಿದರು.
ವಿದ್ಯುನ್ಮಾನ ಮಾಧ್ಯಮಗಳು ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆ ಮೊದಲು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ/ ಪರಿಣಾಮ ಬೀರುವ ವಿಷಯಗಳನ್ನು ಪ್ರಸಾರ ಮಾಡಬಾರದು. ಇದೇ 10 ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸ್ವತ್ತು ಮುಟ್ಟುಗೋಲು: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ಇದುವರೆಗೆ ರೂ. 10 ಲಕ್ಷದ ಐವತ್ತಾರು ಸಾವಿರದ ಐದುನೂರ ನಲವತ್ತೆಂಟು ಮೊತ್ತದ ಹಣ ವಶಪಡಿಸಿಕೊಳ್ಳಲಾಗಿದೆ. ರೂ. 14 ಲಕ್ಷದ ಎಂಟು ಸಾವಿರ ಮೌಲ್ಯದ 176 ಸೋಲಾರ್ ದೀಪಗಳನ್ನು ವಶಕ್ಕೆ ಪಡೆದಿದ್ದು, 2 ಲಕ್ಷ 16 ಸಾವಿರ ಮೌಲ್ಯದ ಮಾಧಕ ವಸ್ತುಗಳು ಹಾಗೂ ಅಕ್ರಮ ದಂಧೆಗೆ ಬಳಸಿದ್ದ ರೂ. 31.10 ಲಕ್ಷ ಮೌಲ್ಯದ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಂಕಿ ಅಂಶ ನೀಡಿದರು. ಒಟ್ಟು ವಶಪಡಿಸಿಕೊಂಡಿರುವ ಸ್ವತ್ತುಗಳ ಮೌಲ್ಯ ರೂ. 57,90,548 ಮೊತ್ತ ಹಾಗೂ 8368.15 ಲೀಟರ್ ಅಕ್ರಮ ಮದ್ಯ ಸೇರಿದೆ ಎಂದು ತಿಳಿಸಿದರು.
ಎಸ್ಪಿ ಹೇಳಿಕೆ : ಜಿಲ್ಲೆಯ 538 ಮತಗಟ್ಟೆಗಳಲ್ಲಿ ಮುಕ್ತ ಮತದಾನಕ್ಕೆ ಸೂಕ್ತ ಭದ್ರತೆಯೊಂದಿಗೆ, ಮುಕ್ತ ಮತದಾನಕ್ಕೆ ಕ್ರಮ ಕೈಗೊಂಡಿರುವದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ಗೋಷ್ಠಿಯಲ್ಲಿ ತಿಳಿಸಿದರು. ಚುನಾವಣಾ ಭದ್ರತೆಗಾಗಿ ಕೊಡಗು ಪೊಲೀಸರೊಂದಿಗೆ, ಕರ್ನಾಟಕ ಮೀಸಲು ಪೊಲೀಸ್, ಅರೆಸೇನಾ ಪಡೆ, ಗಡಿಭದ್ರತಾ ಪಡೆ, ಗೃಹ ರಕ್ಷಕ ಸಿಬ್ಬಂದಿ ಶ್ರಮಿಸಲಿದ್ದು, ಜಿಲ್ಲೆಯ 14 ಚೆಕ್‍ಪೋಸ್ಟ್‍ಗಳ ಸಹಿತ ಎಲ್ಲೆಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಅಧಿಕಾರಿಗಳ ತಂಡ: ಚುನಾವಣಾ ಭದ್ರತೆಗಾಗಿ ಆರು ಡಿವೈಎಸ್ಪಿಗಳು, 12 ಇನ್ಸ್‍ಪೆಕ್ಟರ್‍ಗಳು, 49 ಸಬ್‍ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ 538 ಮತಗಟ್ಟೆಗಳಿಗೆ ಪ್ರತ್ಯೇಕ ರಕ್ಷಣಾ ತಂಡಗಳನ್ನು ರೂಪಿಸಿದ್ದು, ಜನತೆ ನಿರ್ಭಯದಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅವರು ಸಲಹೆ ನೀಡಿದರು.
ನಕ್ಸಲರು ಈ ಹಿಂದೆ ಸುಳಿದಾಡಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಯೊಂದಿಗೆ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗ ದಂತೆ ನಿಗಾವಹಿಸಲಾಗುವದು ಎಂದು ಎಸ್ಪಿ ಸುಳಿವು ನೀಡಿದರು. ಸಾರ್ವಜನಿಕರು ಯಾವದೇ ತುರ್ತು ಸೇವೆಗಾಗಿ ಪೊಲೀಸ್ ಇಲಾಖೆಯನ್ನು ಸಂಪರ್ಕ ಸಂಖ್ಯೆ 100 ಅಥವಾ 08272-228330ಕ್ಕೆ ಕರೆ ಮಾಡು ವಂತೆ ಸಲಹೆಯಿತ್ತರು. ಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹಾಜರಿದ್ದರು.