ಸೋಮವಾರಪೇಟೆ, ಮೇ 7: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 132 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರಕ್ಕೇರಲಿದ್ದು, ಬಿಜೆಪಿ ಕಳೆದ ಸಾಲಿಗಿಂತ 10 ಹೆಚ್ಚುವರಿ ಸ್ಥಾನಗಳನ್ನಷ್ಟೇ ಪಡೆಯಲಿದೆ. ಜೆಡಿಎಸ್ 20 ಸ್ಥಾನ ಗಳಿಸುವದೂ ಅಸಾಧ್ಯ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಕ್ಕಲಿಗ ಕೋಟಾದಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ನಾನು ಕೂಡ ಒಕ್ಕಲಿಗನಾಗಿದ್ದು, ಮುಂದಿನ ದಿನಗಳಲ್ಲಿ ನನಗೂ ಕೂಡ ಒಕ್ಕಲಿಗರು ಅವಕಾಶ ನೀಡಬೇಕು ಎಂದರು.
ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಈಗಾಗಲೇ ಜೆಡಿಎಸ್‍ನವರಿಗೆ ಅರಿವಾಗಿರುವದರಿಂದ ನಮ್ಮ ಪ್ರಣಾಳಿಕೆಗೆ ಬೆಂಬಲ ನೀಡುವ ಪಕ್ಷಗಳಿಗೆ ಬೆಂಬಲ ನೀಡಲಾಗುವದು ಎಂದು ಪರೋಕ್ಷವಾಗಿ ಸೋಲೊಪ್ಪಿ ಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಬಾರಿಯ ಚುನಾವಣೆಯಲ್ಲಿ 132 ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಶಾಂತಿಯಿಂದ ಮಾತ್ರ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ಬಿಜೆಪಿ ಆಡಳಿತದ ಸಂದರ್ಭ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಮಂತ್ರಿಗಳು ಜೈಲಿಗೆ ಹೋಗಿ ಬಂದರು. ಈಗ ಅದೇ ಪಕ್ಷದವರು ‘ಅಚ್ಚೇದಿನ್ ಆಯೇಗಾ’ ಅಂತ ಹಗಲು ಕನಸು ಕಾಣುತ್ತಿದ್ದಾರೆ. ಆದರೆ ಈ ದೇಶಕ್ಕೆ ಅಚ್ಚೇದಿನ್ ಇನ್ನೂ ಬಂದಿಲ್ಲ. ಕಪ್ಪುಹಣವನ್ನು ತಂದು ಬಡವರ ಖಾತೆಗೆ ರೂ.15 ಲಕ್ಷ ಹಣವನ್ನು ಹಾಕುತ್ತೇವೆ ಎಂದು ಹೇಳಿದರು. ಈ ಬಾರಿ ಪ್ರಚಾರಕ್ಕೆ ಬಂದಾಗ 15 ಲಕ್ಷ ಪಡೆದು ಮತ್ತೆ ಮಾತನಾಡುವಂತೆ ಸಾರ್ವಜನಿಕರು ಹೇಳಬೇಕು ಎಂದರು.
ಟಿಪ್ಪು ದೇಶದ್ರೋಹಿ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಆದರೆ ರಾಷ್ಟ್ರಪತಿಯವರೂ ಕೂಡ ಟಿಪ್ಪು ದೇಶಪ್ರೇಮಿ ಎಂದು ಗುಣಗಾನ ಮಾಡಿದ್ದಾರೆ. ಆದರೂ ಬಿಜೆಪಿಯವರಿಗೆ ಬುದ್ಧಿಬಂದಿಲ್ಲ. ಆ ವಿಷಯವನ್ನು ಪ್ರಮುಖವಾಗಿ ಬಳಸಿಕೊಂಡು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ಜನತೆ ಜಾಗೃತರಾಗಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಧಾನಮಂತ್ರಿ ಮೋದಿಯವರು ಬೆಂಗಳೂರನ್ನು ಕರಪ್ಷನ್ ಸಿಟಿ, ಗಾರ್ಬೇಜ್ ಸಿಟಿ ಮತ್ತು ಕ್ರೈಂ ಸಿಟಿ ಎಂದು ಮೂದಲಿಸುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಅವರು ಕೂಡಲೇ ರಾಜ್ಯದ ಜನತೆಯನ್ನು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭ ಪಕ್ಷದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಶಶಿಧರ್, ಅಪ್ರು ರವೀಂದ್ರ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು.