ಸೋಮವಾರಪೇಟೆ, ಮೇ 7: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಿಜೆಪಿ ನಾಯಕಿ, ಚಲನಚಿತ್ರ ತಾರೆ ಶುೃತಿ ಅವರೊಂದಿಗೆ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಸೋಮವಾರಪೇಟೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಬಿಜೆಪಿ ನಾಯಕರಾದ ಶುೃತಿ ಅವರು ಜನರತ್ತ ಕೈ ಬೀಸುವ ಮೂಲಕ ರೋಡ್ ಶೋ ನಡೆಸಿದರು. ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ, ಅಪ್ಪಚ್ಚು ರಂಜನ್ ಪರ ಘೋಷಣೆಗಳನ್ನು ಮೊಳಗಿಸಿದರು.
ವಿವೇಕಾನಂದ ವೃತ್ತದಿಂದ ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಮುಖ್ಯ ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ, ಮುಖಂಡರಾದ ಶುಂಠಿ ಭರತ್ಕುಮಾರ್, ವಿ.ಎಂ. ವಿಜಯ, ಮನುಕುಮಾರ್ ರೈ, ವಿ.ಕೆ. ಲೋಕೇಶ್, ಮಂಜುಳಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.