ಸಿದ್ದಾಪುರ, ಮೇ 7 : ಮೃತರ ಶವ ಸಂಸ್ಕಾರ ನಡೆಸಲು ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರಿಗೆ, ಸ್ಥಳದಲ್ಲಿ ಸಂಪೂರ್ಣ ಹಿಂದೂ ರುದ್ರಭೂಮಿ ಒತ್ತುವರಿದಾರರ ಕೈಗೆ ಸಿಲುಕಿ ನರ್ಸರಿಯಾಗಿ ಮಾರ್ಪಾಡಾಗಿರುವದನ್ನು ಕಂಡು ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಕಂಗಾಲಾದ ಘಟನೆ ನೆಲ್ಯಹುದಿಕೇರಿ ಸಮೀಪದ ನಲ್ವತ್ತೇಕರೆಯಲ್ಲಿ ನಡೆದಿದೆ.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೇಕರೆಯ ಹೊಳೆಕರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶವ ಸಂಸ್ಕಾರ ನಡೆಸಲು ಸಾರ್ವಜನಿಕ ಹಿಂದೂ ರುದ್ರ ಭೂಮಿ ಅಸ್ಥಿತ್ವದಲ್ಲಿದ್ದು, ಕಳೆದ ಕೆಲವು ತಿಂಗಳುಗಳ ಹಿಂದೆ ಸ್ಥಳೀಯ ಮಹಿಳೆಯೊಬ್ಬರು ಮೃತಪಟ್ಟ ಸಂದರ್ಭ ಸಂಸ್ಕಾರಕ್ಕೆ ತೆರಳಿದ ಗ್ರಾಮಸ್ಥರಿಗೆ ಸ್ಮಶಾನ ಜಾಗ ಒತ್ತುವರಿ ಮಾಡಿರುವದು ಕಂಡು ಬಂದಿದ್ದು, ಈ ಸಂಬಂಧ ಒತ್ತುವರಿದಾರ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಕುರಿತು ಗ್ರಾ.ಪಂ. ಗಮನಕ್ಕೂ ತಂದಿದ್ದರು.

ಘಟನೆಯು ನಡೆದು ಮೂರು ತಿಂಗಳ ನಂತರ ಇದೀಗ ಭಾನುವಾರದಂದು ಗ್ರಾಮದಲ್ಲಿ ಮಹಿಳೆಯೋರ್ವಳು ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಿದ ಸಂದರ್ಭ ಮೊದಲಿದ್ದ ಹಿಂದೂ ರುದ್ರ ಭೂಮಿ ಸಂಪೂರ್ಣವಾಗಿ ಕಾಳು ಮೆಣಸು ಬಳ್ಳಿಗಳ ನರ್ಸರಿಯಾಗಿ ಮಾರ್ಪಾಡಾಗಿರುವದನ್ನು ಕಂಡು ಗ್ರಾಮಸ್ಥರು ದಿಗ್ಬ್ರಮೆಗೊಂಡು ಒತ್ತುವರಿದಾರರನ್ನು ಪ್ರಶ್ನಿಸಿದ ಸಂದರ್ಭ ಆತ ಗ್ರಾಮಸ್ಥರನ್ನು ಬೆದರಿಸುವದೂ ಅಲ್ಲದೆ ಸ್ಮಶಾನ ಜಾಗ ಎಂಬದಕ್ಕೆ ಸಾಕ್ಷ್ಯಾಧಾರಗಳು, ಜಾಗದ ಆರ್.ಟಿ.ಸಿ ತೋರಿಸಿ ಗ್ರಾಮಸ್ಥರನ್ನೇ ಪ್ರಶ್ನಿಸಿ, ತಾಕತ್ತಿದ್ದರೆ ಜಾಗ ಬಿಡಿಸಿಕೊಳ್ಳಿ ಎಂದು ಸವಾಲು ಹಾಕಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ, ಸ್ಮಶಾನ ಜಾಗವನ್ನು ಹಿಂಪಡೆಯುವ ಸಲುವಾಗಿ ಗ್ರಾಮದ ಪಿಡಿಓ, ಗ್ರಾಮ ಲೆಕ್ಕಿಗ,ಗ್ರಾಮ ಪಂಚಾಯತ್ ಅಧ್ಯಕ್ಷರು,ಕಂದಾಯ ಅಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಪಟ್ಟು ಹಿಡಿದರು. ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಸುಬ್ರಮಣ್ಯ ಹಾಗೂ ಗ್ರಾಮ ಲೆಕ್ಕಿಗೆ ಅನುಷಾ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಪಟ್ಟು ಬಿಡದ ಗ್ರಾಮಸ್ಥರು ಸಂಪೂರ್ಣ ಸ್ಮಶಾನವನ್ನು ಒತ್ತುವರಿದಾರರಿಂದ ಬಿಡಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಗ್ರಾಮ ಲೆಕ್ಕಿಗೆ ಅನುಷಾರವರು ಈ ಮೊದಲೇ ಶವ ಸಂಸ್ಕಾರ ಮಾಡಿದ ಸ್ಮಶಾನ ಜಾಗದ ಪಕ್ಕದಲ್ಲಿ ಶವ ಸಂಸ್ಕಾರ ನಡೆಸಲು ಆದೇಶಿಸಿದರು. ನಿಗದಿಪಡಿಸಿದ ಜಾಗದಲ್ಲಿದ್ದ ಮೆಣಸು ಬಳ್ಳಿಗಳನ್ನು ಗ್ರಾಮಸ್ಥರ ಸಹಕಾರದಿಂದ ಹಾಗೂ ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಕುರಿತು ಮಾತನಾಡಿದ ಗ್ರಾಮ ಲೆಕ್ಕಿಗೆ ಅನುಷಾ ಗ್ರಾಮದ ಸ್ಮಶಾನವನ್ನು ಸ್ಥಳೀಯ ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನರ್ಸರಿ ಮಾಡಿಕೊಂಡಿರುವದು ಕಾನೂನಿಗೆ ವಿರುದ್ಧವಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಲಾಗುವದು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವದೆಂದರು. ಕೆಲವೇ ದಿನಗಳಲ್ಲಿ ನಲ್ವತ್ತೇಕರೆಯ ಹಿಂದೂ ರುದ್ರ ಭೂಮಿಯನ್ನು ಒತ್ತುವರಿದಾರರಿಂದ ಮುಕ್ತಗೊಳಿಸಲಾಗುವದೆಂದು ಭರವಸೆ ನೀಡಿದರು. ಅಲ್ಲದೆ ಸ್ಮಶಾನ ಭೂಮಿಯಲ್ಲಿ ಮೋಟಾರ್ ಅಳವಡಿಸಲು ಅನುಮತಿ ನೀಡಿದ ಸ್ಥಳೀಯ ಗ್ರಾ.ಪಂ. ವಿರುದ್ಧ ಕ್ರಮ ಕೈಗೊಳ್ಳಲಾಗುವದೆಂದರು.

ನೆಲ್ಯಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ಮಾತನಾಡಿ ಕಳೆದ ಹಲವಾರು ದಶಕಗಳಿಂದ ಶವ ಸಂಸ್ಕಾರಕ್ಕೆ ಮುಕ್ತವಾಗಿದ್ದ ಹಿಂದು ರುದ್ರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವದು ದುರದೃಷ್ಟಕರ, ಈ ಕುರಿತು ಕ್ರಮ ಕೈಗೊಳ್ಳಲಾಗುವದೆಂದರು.

ಗ್ರಾ.ಪಂ. ಸದಸ್ಯ ಯೋಗೇಶ್ ಮಾತನಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪೊಲೀಸರನ್ನು ನೇಮಿಸಲಾಗಿತ್ತು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಸದಸ್ಯರಾದ ಇಂದಿರಾ, ಶಶಿ, ಶೈಲಾ, ಗ್ರಾಮಸ್ಥರಾದ ಮಂಜು, ಮಣಿ, ಕೆ.ಟಿ. ಷಾಜಿ, ಸುದೀಶ್ ಮತ್ತಿತರರು ಹಾಜರಿದ್ದರು.