ಸಿದ್ದಾಪುರ, ಮೇ 8: ಕಟ್ಟಡದ ಮೇಲ್ಭಾಗದಲ್ಲಿ ಮಲಗಿ ನಿದ್ರಿಸಲು ತೆರಳಿದ ಕಾರ್ಮಿಕನೋರ್ವ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ಮೂಲತಃ ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಮಾಪಲ ನಿವಾಸಿಯಾಗಿರುವ ಸುಧೀರ್ ಕುಮಾರ್ (31) ಎಂಬಾತ ಕಳೆದ ಕೆಲವು ದಿನಗಳಿಂದ ನೆಲ್ಯಹುದಿಕೇರಿ ಗ್ರಾಮದಲ್ಲಿ ಗಾರೆ ಕೆಲಸ ಮಾಡುತ್ತಿದ್ದನು. ಸೋಮವಾರದಂದು ಕೆಲಸ ಮುಗಿಸಿ ನೆಲ್ಯಹುದಿಕೇರಿಯ ಪಟ್ಟಣದ ಬಳಿ ಇರುವ ಬಾಡಿಗೆ ಕೊಠಡಿಯಲ್ಲಿ ತಂಗುತ್ತಿದ್ದ. ರಾತ್ರಿ ಸಮಯದಲ್ಲಿ ಶೆಕೆಯಾದ ಹಿನ್ನೆಲೆಯಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಮಲಗಿ ನಿದ್ರಿಸಲು ತೆರಳಿದ ಎನ್ನಲಾಗಿದೆ.(ಮೊದಲ ಪುಟದಿಂದ)ಈ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಮೇಲ್ಭಾಗದಿಂದ ಬಿದ್ದು ರಕ್ತಸ್ರಾವಗೊಂಡು ಸ್ಥಳದಲ್ಲೇ ದುರ್ಮರಣಗೊಂಡಿದ್ದಾನೆ. ಸುಧೀರ್ ಕುಮಾರ್ ಸಾವನ್ನಪ್ಪಿರುವ ಘಟನೆ ಸಹಪಾಠಿಗಳಿಗೆ ಬೆಳಿಗ್ಗೆ ತಿಳಿದು ಬಂದಿದೆ.
ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.