ಸಿದ್ದಾಪುರ, ಮೇ 8: ಡೆಬಿಟ್ ಕಾರ್ಡ್‍ನ ಸಂಖ್ಯೆ ಪಡೆದು ಹಣ ಲಪಟಾಯಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಜೋಸೆಫ್ ಕಿರಣ್ ಎಂಬವರ ಮೊಬೈಲ್ ಸಂಖ್ಯೆಗೆ ಬೆಂಗಳೂರಿನ ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿ ತಾನು ಬೆಂಗಳೂರಿನ ಬ್ಯಾಂಕ್‍ನಿಂದ ಮಾತನಾಡುತ್ತಿರುವದಾಗಿ ತಿಳಿಸಿದರು ಎನ್ನಲಾಗಿದೆ. ನಂತರ ಜೋಸೆಫ್ ಕಿರಣ್ ಅವರಿಗೆ ಕರೆ ಮಾಡಿದ ವ್ಯಕ್ತಿ ನಿಮ್ಮ ಡೆಬಿಟ್ ಕಾರ್ಡ್ ದುರಸ್ತಿಯಾಗಿದ್ದು, ಅದನ್ನು ಸರಿಪಡಿಸಲು ಕಾರ್ಡ್‍ನ ಓ.ಟಿ.ಪಿ. ಸಂಖ್ಯೆಯನ್ನು ತಿಳಿಸುವಂತೆ ತಿಳಿಸಿದ್ದಾನೆ. ಈ ಸಂಖ್ಯೆಯನ್ನು ಪಡೆದ ಅನಾಮಿಕ ವ್ಯಕ್ತಿಯು ಜೋಸೆಫ್ ಕಿರಣ್ ಅವರ ಖಾತೆಯಿಂದ ರೂ. 83 ಸಾವಿರ ಹಣ ಡ್ರಾ ಮಾಡಿ ಲಪಟಾಯಿಸಿದ್ದಾನೆ.

ಹಣ ಕಳೆದುಕೊಂಡ ಜೋಸೆಫ್ ಕಿರಣ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಖಾತೆ, ಎ.ಟಿ.ಎಂ. ಡೆಬಿಟ್ ಕಾರ್ಡ್ ಸಂಖ್ಯೆ ಪಡೆದು ವಂಚನೆ ಮಾಡುತ್ತಿರುವ ಘಟನೆಗಳು ನಡೆಯುತ್ತಲೇ ಇರುವದು ಹಲವರ ನೆಮ್ಮದಿ ಕೆಡಿಸುತ್ತಿದೆ. - ವಾಸು