ಮಡಿಕೇರಿ, ಮೇ 8: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ ಅವರು, ಇಂದು ಮಡಿಕೇರಿಗೆ ಭೇಟಿ ನೀಡಿ ಮೇ 12 ರಂದು ನಡೆಯಲಿರುವ ಚುನಾವಣೆ ಸಂಬಂಧ ‘ರೋಡ್ ಶೋ’ ಮುಖಾಂತರ ಬಿಜೆಪಿ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದರು.
ಬಿಗಿ ಭದ್ರತೆಯ ನಡುವೆ ನಗರದ ಗಾಲ್ಫ್ ಮೈದಾನದ ಹೆಲಿಪ್ಯಾಡ್ಗೆ ಹಗಲು 11.40ರ ಸುಮಾರಿಗೆ ಬಂದಿಳಿದ ಅಮಿತ್ ಶಾ ಅವರು, ಹೆಲಿಪ್ಯಾಡ್ನಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಅಭ್ಯರ್ಥಿಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ ಸೇರಿದಂತೆ ಪಕ್ಷದ ಪ್ರಮುಖರಿಂದ ಸ್ವಾಗತಿಸಲ್ಪಟ್ಟರು. ಮರುಕ್ಷಣದಲ್ಲಿ ಮೊದಲೇ ಹೆಲಿಪ್ಯಾಡ್ ಬಳಿ ಕಾಯ್ದಿರಿಸಿದ್ದ ಗುಂಡು ನಿರೋಧಕ ವಾಹನದಲ್ಲಿ (ಸ್ಕಾರ್ಪಿಯೋ) ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್ಗೆ ಆಗಮಿಸಿದರು.
ಅಲ್ಲಿಯೂ ಭದ್ರತೆಯ ನಡುವೆ ಕಾಯ್ದಿರಿಸಿದ ಕೊಠಡಿಗೆ ಬಂದ ಬಿಜೆಪಿ ರಾಷ್ಟ್ರಾಧ್ಯಕ್ಷರು, ಬಿಜೆಪಿ ಅಭ್ಯರ್ಥಿಗಳ ಸಹಿತ ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮತ್ತು ಪ್ರಮುಖರೊಂದಿಗೆ ಅರೆಕ್ಷಣ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಉಭಯಕುಶಲೋಪರಿ ಯೊಂದಿಗೆ ಕಾಫಿ ಸೇವಿಸಿದರು. ಈ ಸಂದರ್ಭ ಕಾಫಿ ಬೆಳೆಗಾರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು, ಕಾಫಿ ಹಾಗೂ ಕಾಳು ಮೆಣಸು ಮಾರುಕಟ್ಟೆ ದುಸ್ಥಿತಿ ಬಗ್ಗೆ ಕೊಠಡಿಗೆ ತೆರಳಿ
(ಮೊದಲ ಪುಟದಿಂದ) ಮನವಿ ಸಲ್ಲಿಸಿದಾಗ ಒಂದು ಶಬ್ಧದಿಂದ ಪರಿಶೀಲನೆಯ ಭರವಸೆ ನೀಡುವದರೊಂದಿಗೆ, ಭದ್ರತಾ ಪಡೆ ಎಲ್ಲರನ್ನು ಹೊರಗೆ ಕಳುಹಿಸಿದರು.
ಅಲ್ಲಿಂದ ತಕ್ಷಣ ನೇರವಾಗಿ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಆಗಮಿಸಿದ ಅಮಿತ್ ಶಾ ಅಲ್ಲಿ ಕೆಲವು ನಿಮಿಷ ದೇವಿಗೆ ಕೈ ಮುಗಿಯುವದರೊಂದಿಗೆ ಭಕ್ತಿ ಪೂರ್ವಕ ಪ್ರಾರ್ಥನೆ ಸಲ್ಲಿಸಿದ್ದು, ಗೋಚರಿಸಿತು. ಅರ್ಚಕರು ಸನ್ನಿಧಿ ಯಿಂದ ತೀರ್ಥ ಪ್ರಸಾದ ನೀಡುತ್ತಲೇ ಹೊರಬಂದ ಅಮಿತ್ ಶಾ ಪುಷ್ಪಾಲಂಕೃತ ವಾಹನವೇರಿ ‘ರೋಡ್ ಶೋ’ ಆರಂಭಿಸಿದರು.
ಸಂಸದರು, ಅಭ್ಯರ್ಥಿಗಳಲ್ಲದೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರು ತೆರೆದ ವಾಹನದಲ್ಲಿ ಅಮಿತ್ ಶಾ ಅವರೊಂದಿಗೆ ಕಾಣಿಸಿಕೊಂಡರೆ, ಸಾವಿರಾರು ಕಾರ್ಯಕರ್ತರು ಜೈ ಘೋಷ ಮೊಳಗಿಸುತ್ತಾ ಮುಂದೆ ಸಾಗಿದರು. ಕೇರಳದ ಚಂಡೆವಾದ್ಯ ಹಾಗೂ ಕೊಡಗಿನ ವಾಲಗ ಮೆರವಣಿಗೆಗೆ ಶೋಭೆ ನೀಡಿದರೆ, ಮೋದಿ... ಮೋದಿ... ಉದ್ಘೋಷದೊಂದಿಗೆ ಉತ್ಸಾಹಭರಿತ ಯುವ ಪಡೆ ಬಿಜೆಪಿ ಪತಾಕೆ ಹಾರಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಎದುರಾಯಿತು.
ರಸ್ತೆಯ ಇಕ್ಕೆಡೆಗಳಲ್ಲಿ ಮಹದೇವ ಪೇಟೆ ಮುಖ್ಯ ರಸ್ತೆ, ಮಾರುಕಟ್ಟೆ ಮಸೀದಿ ಬಳಿಯೂ ಸೇರಿದಂತೆ ಎಲ್ಲಾ ಸಮುದಾಯದ ಜನ ಅಲ್ಲಲ್ಲಿ ಗುಂಪು ಗುಂಪಾಗಿ ಅಮಿತ್ ಶಾ ಅವರನ್ನು ಕುತೂಹಲಭರಿತರಾಗಿ ನೋಡುತ್ತಿದ್ದರೆ, ಎಲ್ಲರಿಗೂ ಮುಗುಳ್ನಗೆ ಬೀರುತ್ತಾ ಬಿಜೆಪಿ ಅಭ್ಯರ್ಥಿಗಳ ಸಹಿತ ಪಕ್ಷಾಧ್ಯಕ್ಷರು ಜನರತ್ತ ಕೈ ಬೀಸುತ್ತಿದ್ದ ಚಿತ್ರಣ ಕಂಡು ಬಂತು.
ನಗರದ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಚಿಕ್ಕಪೇಟೆಗಾಗಿ ಕಿಕ್ಕಿರಿದ ಜನತೆ ನಡುವೆ ಜನರಲ್ ತಿಮ್ಮಯ್ಯ ವೃತ್ತಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆಯೇ ಅರೆಕ್ಷಣದಲ್ಲಿ ಇಳಿದು ಗುಂಡು ನಿರೋಧಕ ವಾಹನ ವೇರಿದ ಬಿಜೆಪಿ ರಾಷ್ಟ್ರಾಧ್ಯಕ್ಷರು, ಗಾಂಧಿ ಮೈದಾನ ಮಾರ್ಗವಾಗಿ ಗಾಲ್ಫ್ ಹೆಲಿಪ್ಯಾಡ್ಗೆ ತೆರಳಿ ಪೂರ್ವಸಿದ್ಧತೆ ಯಲ್ಲಿದ್ದ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ನಿರ್ಗಮಿಸಿದರು.
ಪೂರ್ವ ನಿಗದಿತ ಕಾರ್ಯ ಕ್ರಮದಲ್ಲಿ 11.40ರಿಂದ 1.35ರ ತನಕ ಕೊಡಗು ಜಿಲ್ಲಾ ಕೇಂದ್ರದಲ್ಲಿ ಕಾಣಿಸಿಕೊಂಡು ರೋಡ್ ಶೋ ನಡೆಸಿದ ಅವರು, ಸರಿ ಸುಮಾರು ಒಂದು ಗಂಟೆ ಐವತ್ತೈದು ನಿಮಿಷಗಳ ಉಪಸ್ಥಿತಿಯಲ್ಲಿ ಮಾಧ್ಯಮಕ್ಕೂ ಏನೊಂದು ಹೇಳಿಕೆ ನೀಡದೆ ನಿರ್ಗಮಿಸಿದ್ದು, ನೆರೆದಿದ್ದ ಬಿಜೆಪಿ ಕಾರ್ಯಕರ್ತರ ಸಹಿತ ಎಲ್ಲರಲ್ಲಿ ಅಚ್ಚರಿ ಮೂಡುವಂತಾಯಿತು.
ಅಮಿತ್ ಶಾ ಭೇಟಿ ಸಂದರ್ಭ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬಿಜೆಪಿ ಪ್ರಮುಖರಾದ ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ರವಿ ಕಾಳಪ್ಪ, ಕೊಡಗು ಪ್ರಭಾರಿ ರಾಜಸ್ಥಾನದ ಧರ್ಮ ನಾರಾಯಣ ಜೋಶಿ ಸೇರಿದಂತೆ ಇತರ ಪ್ರಮುಖರು, ಸಾವಿರಾರು ಕಾರ್ಯಕರ್ತರ ಸಹಿತ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.