(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಮೇ 8: ಬಿ.ಜೆ.ಪಿ. ಪಕ್ಷದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸುವ ನಿರೀಕ್ಷೆಯಲಿದ್ದ ಪಕ್ಷದ ಕಾರ್ಯಕರ್ತರಿಗೆ ನಿರಾಶೆಯಾಯಿತು. ಬಿರುಬಿಸಿಲಿನ ನಡುವೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸಾಗರೋಪಾದಿಯಲ್ಲಿ ಮೈದಾನಕ್ಕೆ ಆಗಮಿಸುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಯ ವೇಳೆ ಸುರಿದ ಬಾರೀ ಮಳೆಯಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು. ಗೋಣಿಕೊಪ್ಪ ನಗರದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಬಿ.ಜೆ.ಪಿ. ಪಕ್ಷದ ಬಂಟಿಂಗ್ಸ್ ಹಾಗೂ ಬಾವುಟಗಳು ರಾರಾಜಿಸುತ್ತಿದ್ದವು. ಅರಸೇನೆಯ ಪಡೆಗಳು ಆಯಾಕಟ್ಟಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದುದು ಕಂಡು ಬಂದಿತು.
ಕಾವೇರಿ ಕಾಲೇಜಿನ ಮೈದಾನಕ್ಕೆ ಹೆಲಿಕ್ಯಾಪ್ಟರ್ನಲ್ಲಿ ಸರಿಯಾಗಿ 4 ಗಂಟೆಗೆ ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ರನ್ನು ಪಕ್ಷದ ಮುಖಂಡರು, ಸಂಸದ ಪ್ರತಾಪ್ ಸಿಂಹ, ಮಡಿಕೇರಿ, ವೀರಾಜಪೇಟೆಯ ಶಾಸಕರಾದ ಅಪ್ಪಚ್ಚುರಂಜನ್, ಕೆ.ಜಿ ಬೋಪಯ್ಯ ಇನ್ನಿತರ ಗಣ್ಯರು ಬರಮಾಡಿಕೊಳ್ಳಲು ಸಜ್ಜಾಗಿದ್ದರು. ದಿಢೀರ್ ಸುರಿದ ಮಳೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಇಳಿಯಲು ಸಾಧ್ಯವಿಲ್ಲದ ಕಾರಣ ಆದಿತ್ಯನಾಥ್ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಇದರಿಂದ ಆಯೋಜಕರಿಗೆ ನಿರಾಶೆಯಾಯಿತು.
ಕಾಲೇಜು ಆವರಣದಲ್ಲಿರುವ ಮಹಾಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಮೇಜರ್ ನಂದ, ಕಬ್ಬಚ್ಚೀರ ಸುಬ್ರಮಣಿ, ಕೊಡಂದೇರ ಸುಬ್ಬಯ್ಯ, ಎಸ್.ಎಸ್ ಮಾದಯ್ಯ, ಪ್ರೊ. ಉಷಾಲತಾ ಇನ್ನಿತರ ಗಣ್ಯರು ಅಣಿಯಾಗಿದ್ದರು. ಆದರೆ ಆದಿತ್ಯನಾಥ್ ಕಾರ್ಯಕ್ರಮ ರದ್ದಾಗುತ್ತಿದ್ದಂತೆಯೇ ಸ್ಥಳದಿಂದ ಎಲ್ಲರೂ ತೆರಳಿದರು.
ಆದಿತ್ಯನಾಥ್ ಭೇಟಿ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ವಿಶೇಷ ಪಾಸ್ಗಳನ್ನು ಪೊಲೀಸ್ ಇಲಾಖಾ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಮೈದಾನದಲ್ಲಿ ಪೊಲೀಸರು ಅರಸೇನೆ ಪಡೆಗಳು ಗಸ್ತು ತಿರುಗುತ್ತಿರುವದು ಸಹಜವಾಗಿತ್ತು. ಆದಿತ್ಯನಾಥ್ ಭಾಷಣ ಮಾಡುವ ವೇದಿಕೆಯನ್ನು ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ತಂಡ ಹಲವು ಬಾರಿ ತಪಾಸಣೆ ನಡೆಸಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಪಕ್ಷದ ಅಭಿಮಾನಿಗಳು ಆಗಮಿಸಿದ್ದರು.
ಮೂರು ಗಂಟೆಗೆ ಸರಿಯಾಗಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು ಇದರಿಂದ ಆಯೋಜಕರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಮಳೆಯ ರಕ್ಷಣೆ ಪಡೆಯಲು ಕುರ್ಚಿಯನ್ನು ಕಾರ್ಯಕರ್ತರು ಆಸರೆಯಾಗಿ ತಲೆಯ ಮೇಲೆ ಹಿಡಿದುಕೊಂಡಿದ್ದರು. ಮುಖ್ಯ ವೇದಿಕೆ ಬಳಿ ಮಳೆಯ ರಕ್ಷಣೆ ಪಡೆಯಲು ಮಹಿಳೆಯರು ಸೇರಿದಂತೆ ಅಧಿಕಾರಿಗಳು ಆಗಮಿಸಿದರು. ಯುವಕರು ಮಳೆಯನ್ನು ಲೆಕ್ಕಿಸದೇ ಬಿ.ಜೆ.ಪಿ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಮೈದಾನದಲ್ಲಿ ಬಾವುಟಗಳು ರಾರಾಜಿಸುತ್ತಿದ್ದವು. ವಂದೇಮಾತರಂ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಡಿ.ವೈ.ಎಸ್.ಪಿ. ನಾಗಪ್ಪ ನೇತೃತ್ವದಲ್ಲಿ 2 ಡಿ.ವೈ.ಎಸ್.ಪಿ. 5 ಸಿ.ಪಿ.ಐ. 30 ಎ.ಎಸ್.ಐ. 150 ಪೋಲಿಸ್ ಸಿಬ್ಬಂದಿ, ಬಿಹಾರ್ ಫೋರ್ಸ್ 90, ಸೀಮಾ ಸಶಸ್ತ್ರ ದಳ 20, 2 ಡಿ.ಎ.ಆರ್. ತುಕಡಿಗಳು ಪಾಲ್ಗೊಂಡಿದ್ದವು. ಕಾವೇರಿ ಕಾಲೇಜಿನ ಹೆಲಿಪ್ಯಾಡ್ನಲ್ಲಿ ವೈದರ ತಂಡ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳ ನಿಯೋಜಿಸಲಾಗಿತ್ತು. ವೇದಿಕೆ ಬಳಿ ತಹಶೀಲ್ದಾರ್ ಗೋವಿಂದರಾಜ್, ಉಪತಹಶೀಲ್ದಾರ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.