ಸುಂಟಿಕೊಪ್ಪ, ಮೇ 8: ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎ. ಜೀವಿಜಯ ಅವರು ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು. ಈ ಸಂದರ್ಭ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಕೊಡಗಿನ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಿಜೆಪಿಯನ್ನು ಗೆಲ್ಲಿಸುವ ಬದಲಾಗಿ ಜಾತ್ಯತೀತ ನೆಲೆಗಟ್ಟಿನ ಮೇಲೆ ನಿಂತಿರುವ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಜಾತಿ, ಧರ್ಮವನ್ನು ಒಡೆದು ಆಳುವ ಯಾವದೇ ಪಕ್ಷಕ್ಕೂ ಉಳಿಗಾಲವಿಲ್ಲ. ಕಾಂಗ್ರೆಸ್ ಯಾವದೇ ಅಭಿವೃದ್ಧಿ ಕಾರ್ಯ ಮತ್ತು ಅನುದಾನ ಬಿಡುಗಡೆ ಮಾಡಬೇಕಾದರೆ ಬಿಜೆಪಿಯ ಅನುಮತಿ ಕೇಳಬೇಕು. ಇದು ಜನಸಾಮಾನ್ಯರ ದೌರ್ಭಾಗ್ಯ. ಆ ನಿಟ್ಟಿನಲ್ಲಿ ಜನರ ಒಳಿತನ್ನು ಬಯಸುವ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಜನರು ಶಾಂತಿಯಿಂದ ಮತ್ತು ರಾಜ್ಯ ಅಭಿವೃದ್ಧಿ ಪಥದತ್ತ ಮುನ್ನಡೆಯಲಿದೆ ಎಂದರು. ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಮತದಾನ ಮಾಡುವದು ನಮ್ಮ ಹಕ್ಕು. ಮತದಾರರು ಆಲೋಚನೆ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಜನರ ಕಣ್ಣಿಗೆ ಮಣ್ಣೆರಚುವ ಕಾಂಗ್ರೆಸ್, ಕೋಮುವಾದದ ಬಿಜೆಪಿಗೆ ಮತ ನೀಡದೆ ಜಿಲ್ಲೆಗೆ ಪ್ರಗತಿಪರವಾದ ಪಕ್ಷ ಬೇಕಾಗಿದ್ದು ಆ ನಿಟ್ಟಿನಲ್ಲಿ ಜೆಡಿಎಸ್ ಗೆಲ್ಲಿಸಿ ಎಂದರು.

ಅಭ್ಯರ್ಥಿ ಬಿ.ಎ. ಜೀವಿಜಯ ಮಾತನಾಡುವ ಸಂದರ್ಭ ಪೊಲೀಸರು ತಮ್ಮ ಬಹಿರಂಗ ಸಭೆಯ ಅವಧಿ ಮುಕ್ತಾಯವಾಗಿದ್ದು, ಸಭೆ ಮುಗಿಸಬೇಕು ಎಂದು ಸೂಚಿಸಿದರು. ಅದರಂತೆ ಜೀವಿಜಯ ಅವರು ಕೊಡಗಿನ ಜ್ವಲಂತ ಸಮಸ್ಯೆಯ ಬಗ್ಗೆ ನನಗೆ ಅರಿವಿದೆ. ಕೊಡಗಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿ ಭಾಷಣವನ್ನು ಮೊಟಕುಗೊಳಿಸಿದರು.

ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಎಂ.ಎಂ. ಷರಿಫ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಕೆ. ಶಿವದಾಸ್, ಮಹಿಳಾ ಘಟಕದ ಗ್ರೇಸಿ, ಮಡಿಕೇರಿ ಘಟಕದ ನಗರಾಧ್ಯಕ್ಷ ಎನ್.ಎ. ಇಬ್ರಾಹಿಂ, ಸುಂಟಿಕೊಪ್ಪ ನಗರಾಧ್ಯಕ್ಷ ಕೌಶಿಕ್, ಮುಖಂಡರಾದ ಎಂ.ಐ. ರಜಾಕ್, ಅಂಬಾಚು, ಕೆ.ಇ. ಕರೀಂ, ಭಾನುಮತಿ, ಜಾಶೀರ್, ಮುಸ್ತಾಫ ಇತರರು ಇದ್ದರು.