ಮಡಿಕೇರಿ, ಮೇ 8 : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾದ ಕೊಡಗು ಜಿಲ್ಲೆಯ ಬೆಳೆಗಾರರ ವಿವಿಧ ಸಂಘಟನೆಗಳ ಪ್ರಮುಖರು ಕಾಫಿ, ಕರಿಮೆಣಸು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ತುರ್ತು ಪರಿಹಾರಕ್ಕೆ ಮನವಿ ಮಾಡಿದರು. ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುವದಾಗಿ ಬೆಳೆಗಾರರ ಸಂಘಟನೆಗಳ ನಿಯೋಗಕ್ಕೆ ಅಮಿತ್ ಶಾ ಭರವಸೆ ನೀಡಿದರು.

ನಗರದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ಕೂಡಲೇ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿ ಬೆಳೆಗಾರರಿಂದ ಬಲವಂತದ ಸಾಲ ವಸೂಲಾತಿ ಪ್ರಕ್ರಿಯೆ ಸ್ಥಗಿತಗೊಳಿಸ ಬೇಕು. ಬ್ಕಾಂಕ್‍ಗಳಲ್ಲಿ 31.3.2018 ರವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಉಳಿದ ಸಾಲದ ಮೊತ್ತವನ್ನು ವರ್ಷದ ಕಂತುಗಳಾಗಿ ಪರಿವರ್ತಿಸಿ, ಕನಿಷ್ಟ 9 ವರ್ಷಗಳ ಕಾಲಾವಧಿಗೆ ವಿಸ್ತರಿಸಬೇಕು. ಬೆಳೆಗಾರರಿಗೆ ತೋಟದ ನಿರ್ವಹಣಾ ಸಾಲದ ಮೊತ್ತವನ್ನು ಹೆಚ್ಚಿಸಬೇಕು. ಈಗಿರುವ ಎಕ್ರೆವಾರು ಮಿತಿಯನ್ನು ಹೆಚ್ಚಿಸಬೇಕು. ಬ್ಯಾಂಕ್‍ಗಳಲ್ಲಿ ಬೆಳೆಗಾರರ ಸಾಲದ ಮೇಲೆ ಕನಿಷ್ಟ ಶೇ.3 ರೊಳಗೆ ಬಡ್ಡಿಯನ್ನು ನಿಗದಿಗೊಳಿಸಬೇಕು. ಎಲ್ಲಾ ರೀತಿಯ ಸಾಲಗಳಿಗೂ ಈ ಬಡ್ಡಿ ದರವನ್ನು ವಿಸ್ತರಿಸಬೇಕು. ಅಂತೆಯೇ, ಇದು ಸಹಕಾರ ಬ್ಯಾಂಕ್‍ಗಳೂ ಸೇರಿದಂತೆ ವಾಣಿಜ್ಯ ಬ್ಯಾಂಕ್‍ಗಳಿಗೂ ಅನ್ವಯವಾಗಬೇಕು. ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ಬಾಕಿ ಉಳಿದಿರುವ ಸಹಾಯಧನವನ್ನು ವಿಳಂಬರಹಿತವಾಗಿ ಬಿಡುಗಡೆ ಗೊಳಿಸಬೇಕು.

ಡಾ. ಸ್ವಾಮಿನಾಥನ್ ವರದಿಯನ್ವಯ ಕಾಫಿಗೆ ಕನಿಷ್ಟ ಬೆಂಬಲ ಬೆಲೆ ನೀಡಿ ಬೆಳೆಗಾರರ ಹಿತಕಾಯಬೇಕು. ಕಾಫಿ ಮಂಡಳಿಯ ಅಧ್ಯಕ್ಷರಿಗೆ ಪ್ರಸ್ತುತ ಕಾಫಿ ಕಾಯಿದೆ ಯಲ್ಲಿ ಮಂಡಳಿಯ ಕಾರ್ಯಕ್ರಮ ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಕಾರ್ಯವ್ಯಾಪ್ತಿಯನ್ನು ನೀಡಬೇಕು. ಈಗಿರುವ ಎಂ.ಇ.ಐ.ಎಸ್. ಯೋಜನೆ ಯಡಿ ಶೇ.5 ರಷ್ಟಿರುವ ಸಹಾಯ ಧನವನ್ನು ಶೇ.7 ಕ್ಕೆ ಹೆಚ್ಚಿಸಬೇಕು.

ಈಗಾಗಲೇ ವಾಣಿಜ್ಯ ಸಚಿವಾಲಯದಿಂದ ಬೆಳೆಗಾರರಿಗೆ ಪೂರಕವಾಗಿ 3 ಕಾಯಿದೆಗಳು ಜಾರಿಗೊಂಡಿದ್ದು, ಇದು ಸಾಕಷ್ಟು ಮಟ್ಟಿಗೆ ಕಾನೂನು ಬಾಹಿರ ಕರಿಮೆಣಸು ಆಮದಿಗೆ ಕಡಿವಾಣ ಹಾಕಿದಂತಾಗಿದೆ. ಕಳಪೆ ಕರಿಮೆಣಸು ಆಮದು ವಹಿವಾಟು ಮರುಕಳಿಸದಂತೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಜಾಗೃತವಾಗಿರಬೇಕು.

ಅಮಿತ್ ಶಾ ಭೇಟಿಯಾದ ನಿಯೋಗದಲ್ಲಿ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ನ ಆಡಳಿತ ಮಂಡಳಿ ನಿರ್ದೇಶಕ ಕಾರ್ಯಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟದ ಮತ್ತು ಕರಿಮೆಣಸು ಬೆಳೆಗಾರರ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಕೆ.ಕೆ.ವಿಶ್ವನಾಥ್, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ದಿನೇಶ್, ಸೋಮವಾರಪೇಟೆ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಣಣ್ ಗೌಡ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಮಾಜಿ ಶಾಸಕ ಎಸ್.ಜಿ. ಮೇದಪ್ಪ ಹಾಜರಿದ್ದರು.