ಮಡಿಕೇರಿ, ಮೇ 8: ಕೊಡಗಿನ ಸಾಮರಸ್ಯ ಸಹಿಸದೆ ಮತ್ತ ಕೋವಿ ವಿವಾದವನ್ನು ಹುಟ್ಟು ಹಾಕಲಾಗಿದೆ. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿರುವ ವ್ಯಕ್ತಿ ಯಾಲದಾಳು ಚೇತನ್ ಈ ಮೂಲಕ ವೃತ್ತಾ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಮಡಿಕೇರಿ ಕೊಡವ ಸಮಾಜ ಆಕ್ಷೇಪಿಸಿದೆ. ಈ ಕುರಿತು ಕೊಡವ ಸಮಾಜದ ಮೂಲಕ ಪತ್ರಿಕಾ ಹೇಳಿಕೆ ನಿಡಲಾಗಿದ್ದು, ಇದನ್ನು ಖಂಡಿಸಲಾಗಿದೆ. ಪತ್ರಿಕಾ ಹೇಳಿಕೆ ಇಂತಿವೆ ಕೊಡಗಿನ ಜಮ್ಮಾ ಹಿಡುವಳಿದಾರರು ಹೊಂದಿರುವ ಕೋವಿಯಕುರಿತಾಗಿ ಮತ್ತೆ ಗೊಂದಲಕಾರಿ ಹೇಳಿಕೆಗಳು ಕೇಳಿಬರುತ್ತಿವೆ. ಕೊಡಗು ಜಿಲ್ಲೆಯ ಮೂಲನಿವಾಸಿಗಳಾದ ಕೊಡವರು ಜಿಲ್ಲೆಯಲ್ಲಿ ಎಲ್ಲರೊಂದಿಗೆ ಬೆರೆತು ಸಮಾನತೆಯಿಂದ ಬದುಕುತ್ತಿದ್ದಾರೆ. ಆದರೆ ಜಿಲ್ಲೆಯ ಕೆಲವೇ ಕೆಲವು ವಿಕೃತ ಮನಸ್ಸಿನವರು ಇಲ್ಲಿದ್ದು ಗೊಂದಲಗಳನ್ನು ಹುಟ್ಟು ಹಾಕಿ ಸಾಮಾಜಿಕ ಅಸಮಾನತೆಗೆ ಕಾರಣರಾಗುತ್ತಿರುವದು ವಿಷಾದಕರ ಸಂಗತಿಯಾಗಿದೆ. ಇಂಥ ಘಟನೆಗಳನ್ನು ಕೊಡವ ಸಮಾಜ ಮಡಿಕೇರಿ ಖಂಡಿಸುತ್ತದೆ. ಕೊಡವರು ಹೊಂದಿರುವ ಕೋವಿಯ ಕುರಿತು ಕೆಲವು ವರ್ಷಗಳ ಹಿಂದೆ ಯಾಲದಾಳು ಚೇತನ್ ಅನಾವಶ್ಯಕ ವಿವಾದವನ್ನು ಹುಟ್ಟು ಹಾಕಿ ಕೋರ್ಟ್ ಮೆಟ್ಟಿಲೇರಿರುವದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆನಿಟ್ಟಿನಲ್ಲಿ ಹಿಂದೆ ಹಿನ್ನಡೆ ಕಂಡು ಮತ್ತೆ ಅದೇ ವಿಷಯವನ್ನು ಕೆದಕಿ ಏನು ಸಾಧಿಸ ಹೊರಟ್ಟಿದ್ದಾರೆ ಎಂಬದು ತಿಳಿಯುತ್ತಿಲ್ಲ.
ಕೊಡಗಿನ ಮೂಲ ನಿವಾಸಿಗಳಾದ ಕೊಡವ ಜಮ್ಮ ಹಿಡುವಳಿದಾರರಿಗೆ ಕೋವಿ ವಿನಾಯಿತಿ ಸುಮಾರು 200 ವರ್ಷಗಳಿಗೂ ಹಿಂದಿನಿಂದಲೇ ಬಂದಿರುವದಕ್ಕೆ ಪರಿಪೂರ್ಣ ದಾಖಲೆಗಳಿವೆ. ಕೊಡವರು ಕೋವಿಯನ್ನು ಬಳಸುತ್ತಿದ್ದ ಪರಿ, ಅವರು ಕೋವಿಗೆ ನೀಡುತ್ತಿದ್ದ ಮಹತ್ವ ಮತ್ತು ಗೌರವವನ್ನು ವಿಶೇಷವಾಗಿ ಮನಗಂಡು ಅಂದಿನ ಬ್ರಿಟಿಷ್ ಆಡಳಿತ ಕೊಡವರ ಸಂಸ್ಕøತಿಯ ಭಾಗವಾಗಿ ಪರಿಗಣಿಸಿ ವಿನಾಯಿತಿಯನ್ನು ನೀಡಿ ಸಾರ್ವಕಾಲಿಕ ಗೌರವವನ್ನು, ಮಾನ್ಯತೆಯನ್ನು ನೀಡಿದ್ದಾರೆ. ಈ ವಿಷಯ ಎಲ್ಲರಿಗೂ ತಿಳಿದಿರುವದೇ ಆಗಿದೆ.
ಯಾಲದಾಳು ಚೇತನ್ ಕೆಲವು ವರ್ಷಗಳ ಹಿಂದೆ ಕೊಡವರಿಗೆ ನೀಡಿರುವ ಕೋವಿ ವಿನಾಯಿತಿಯ ಔಚಿತ್ಯವನ್ನು ಪ್ರಶ್ನಿಸಿ, ಅದನ್ನು ಅಮಾನ್ಯಗೊಳಿಸುವಂತೆ ಕೋರ್ಟ್ನಲ್ಲಿ ಪಿ.ಐ.ಎಲ್. ಮೂಲಕ ಸರಕಾರದ ಕಾರ್ಯದರ್ಶಿಗೆ ವಿವರ ಬಯಸಿ ನೋಟಿಸ್ ಜಾರಿ ಮಾಡಿಸಿದ್ದೂ, ಅಲ್ಲದೆ ಸರಕಾರದಿಂದ ಕೊಡವರ ಕೋವಿ ವಿನಾಯಿತಿ ಕಾನೂನು ರೀತ್ಯ ಸಿಂಧುವಾಗಿದೆ ಎಂದು ಕೋರ್ಟ್ ಉತ್ತರ ಪಡೆದು ಅರ್ಜಿ ತಳ್ಳಿ ಹಾಕಿದ್ದು ಆಗಿದೆ.
ಇದು ಕಳೆದು ಎಷ್ಟೋ ವರ್ಷ ಕಳೆದು ಹೋಗಿದ್ದರೂ, ಕೊಡಗಿನ ಸಾಮರಸ್ಯ ಬಯಸದ ಇವರು ಮತ್ತೆ ಕೋವಿ ವಿಷಯವನ್ನು ಕೋರ್ಟ್ಗೆ ಎಳೆದು ತಂದು ಮತ್ತೆ ಗೊಂದಲ ಹುಟ್ಟಿಸುತ್ತಿರುವದಷ್ಟೇ ಅಲ್ಲ ಕೊಡವ ಗೌಡ ಎಂಬ ಭೇದವಿಲ್ಲದೆ ಎಲ್ಲರೊಡನೆ ಬೆರೆತು ಬದುಕುತ್ತಿರುವ ಕೊಡಗಿನಲ್ಲಿ ನೆಮ್ಮದಿ-ಸೌಹಾರ್ದತೆ ಕದಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೊಡವರು ಮಾತ್ರ ಕೋವಿ ಬಳಸುತ್ತಿಲ್ಲ, ಕೊಡವರೊಂದಿಗೆ ಒಮ್ಮತದಿಂದ ಬಾಳುತ್ತಿರುವ ಅವರದ್ದೇ ಗೌಡ Àಜನಾಂಗದವರೂ ಮತ್ತು ಇತರೇ ಜಮ್ಮಾ ಹಿಡುವಳಿದಾರರು ಬಳಸುತ್ತಿಲ್ಲವೇ. ಅವರಿಗೂ ಅಮಾನ್ಯತೆಯನ್ನು ನೀಡಿಲ್ಲವೇ. ಅದನ್ನು ನಾವುಗಳು ಪ್ರಶ್ನಿಸಿದ್ದೇವೆಯೇ? ಎಂದು ಸಮಾಜವನ್ನು ಪ್ರಶ್ನಿಸಿದೆ.
ಕೊಡವರು ಕೋವಿಯ ವಿಶೇಷ ಮಾನ್ಯತೆಯನ್ನು ಕೇಳಿ ಪಡೆದದ್ದಲ್ಲ, ಬ್ರಿಟಿಷರು ಕೊಡವರ ಕೋವಿಯ ಬಳಕೆಯನ್ನು ವಿಶೇಷವಾಗಿ ಪರಿಗಣಿಸಿ “ಕೂರ್ಗ್ (ಕೊಡವ) ಬೈರೇಸ್” ಎಂಬ ಮಾನ್ಯತೆಯೊಂದಿಗೆ ಈ ವಿಶೇಷ ವಿನಾಯಿತಿ ನೀಡಿದ್ದಾರೆ. ಆ ಗೌರವವನ್ನು ನಾವುಗಳು ಇಂದಿಗೂ ಗೌರವಿಸುತ್ತಿದ್ದೇವೆ.
ಆದರೆ ಇದೀಗ ಯಾಲದಾಳು ಚೇತನ್ ಅವರು ಕೊಡವರ ಕೋವಿಯ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿದ್ದು, ಕೋರ್ಟ್ ಮೆಟ್ಟಿಲೇರಿ ಕೊಡವರ ಭಾವನೆಗಳ ಮೇಲೆ ಚೆಲ್ಲಾಟ ಆಡ ಹೊರಟಿರುವದು ಸರಿಯಲ್ಲ. ಹಾಗಾಗಿ ವಿಷಯದ ಆಳ-ಅಗಲವನ್ನು ಅರಿತು ವ್ಯವಹರಿಸುವದು ಅವರ ಘನತೆಗೆ ಒಳ್ಳೆಯದು ಎಂಬದು ನಮ್ಮ ಅನಿಸಿಕೆ. ಈಗಾಗಲೇ ನಾವುಗಳು ಅಂದರೆ ಎಲ್ಲಾ ಕೊಡವ ಸಮಾಜಗಳು ಈ ವಿಷಯದಲ್ಲಿ ಚರ್ಚಿಸಿ ಕಾನೂನು ರೀತ್ಯ ವಿಷಯ ಇತ್ಯರ್ಥಕ್ಕೆ ಮುಂದಾಗಿದ್ದೇವೆ. ಯಾವುದೇ ಭಿನ್ನ-ಭೇದವಿಲ್ಲದೆ, ಜನಾಂಗೀಯವಾಗಿ, ಸಾಂಸ್ಕøತಿಕವಾಗಿ ಸಾಮರಸ್ಯದಿಂದ, ಸೌಹಾರ್ದತೆಯಿಂದ ಕೊಡಗಿನಲ್ಲಿ ಬದುಕುತ್ತಿರುವ ನಮ್ಮ ನಮ್ಮಲ್ಲೇ ಒಡಕು ಮೂಡಿಸಲು ಪ್ರಯತ್ನಿಸುತ್ತಿರುವ ವಿಕೃತ ಮನಸ್ಸುಗಳಿಗೆ ಮಡಿಕೇರಿ ಕೊಡವ ಸಮಾಜ ವಿರೋಧ ವ್ಯಕ್ತಪಡಿಸುತ್ತದೆ. ಮಡಿಕೇರಿ ಕೊಡವ ಸಮಾಜ ಮಾಧ್ಯಮಗಳ ಮೂಲಕ ಬಹಿರಂಗ ಪಡಿಸುವದೇನೆಂದರೆ ಕನಿಷ್ಟ ಪಕ್ಷ 2 ಶತಕಗಳಿಂದ ಕೊಡವರು ಕೊಡಗಿನ ಇತರ ಜನಾಂಗದವರೊಂದಿಗೆ ಬಾಳಿ ಬದುಕುತ್ತಿರುವದನ್ನು ಈ ರೀತಿ ಅಡ್ಡಿಪಡಿಸುತ್ತಿರುವದಕ್ಕೆ ವಿಷಾದ ವ್ಯಕ್ತಪಡಿಸುತ್ತದೆ. ಈ ವಿಷಯದಲ್ಲಿ ಈ ಮೇಲೆ ಹೇಳಿರುವ ವ್ಯಕ್ತಿ ಹೂಡಿರುವ ವ್ಯಾಜ್ಯಕ್ಕೆ ಕೊಡಗಿನ ಯಾವದೇ ಜನಾಂಗದವರು ಪ್ರತ್ಯೇಕವಾಗಿಯಾಗಲಿ ಪರೋಕ್ಷವಾಗಿಯಾಗಲಿ ಬೆಂಬಲ ನೀಡದಿರುವದಕ್ಕೆ ಮಡಿಕೇರಿ ಕೊಡವ ಸಮಾಜ ಅಭಿನಂದನೆ ಸಲ್ಲಿಸುತ್ತದೆ.