ಗೋಣಿಕೊಪ್ಪಲು, ಮೇ 8: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ಭಾಷಣಕ್ಕೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ಸಜ್ಜಾಗಿತ್ತು. ಸುಮಾರು 5000 ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಅಪರಾಹ್ನ 3 ಗಂಟೆ ಕಳೆಯುತ್ತಿದ್ದಂತೆಯೇ ಕಾರ್ಮೋಡ ಮೈದಾನದ ಮೇಲೆ ಕವಿದು ಸಿಡಿಲು, ಗುಡುಗು ಮಳೆಯಿಂದ ನೆರೆದಿದ್ದ ಬಿಜೆಪಿ ಅಭಿಮಾನಿಗಳು ಕಂಗಾಲಾದರಲ್ಲದೆ, ಮಳೆಯಿಂದ ರಕ್ಷಣೆ ಪಡೆಯಲು ಸಿಕ್ಕ ಸಿಕ್ಕ ಸೂರಿನ ಆಶ್ರಯ ಪಡೆದರು.
ಸುಳ್ಯದಿಂದ 3 ಗಂಟೆಗೆ ಗೋಣಿಕೊಪ್ಪಲಿಗೆ ಬರಬೇಕಿದ್ದ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಮಳೆಯಿಂದಾಗಿ ‘ಟೇಕ್ ಆಫ್’ ಆಗಲಿಲ್ಲ, ಬದಲಿಗೆ ಕೊಡಗಿಗೆ ಅವಶ್ಯವಾದ ಮಳೆ ಬಂದಿದೆ ಎಂದು ಸಂಘಟಕರು ಧ್ವನಿ ವರ್ಧಕದಲ್ಲಿ ಸಮರ್ಥಿಸಿಕೊಂಡರು. ತಡವಾಗಿ ಯಾದರೂ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಬರಬಹುದೆಂಬ ಆಶಾವಾದದಲ್ಲಿ ಕಾರ್ಯಕರ್ತರು ಕಾದುಕುಳಿತಿದ್ದರು. ಆದರೆ, 4.15 ಗಂಟೆಗೆ ಕರ್ನಾಟಕ ರಾಜ್ಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್‍ಸುಬ್ರಮಣಿ ಮೈದಾನಕ್ಕೆ ಬರುತ್ತಿದ್ದಂತೆಯೇ ಯೋಗಿ ಆದಿತ್ಯನಾಥ್ ಗೋಣಿಕೊಪ್ಪಲು ಕಾರ್ಯಕ್ರಮ ರದ್ದಾಗಿರುವದು ಖಚಿತವಾಯಿತು. ಇದಕ್ಕೂ ಮುನ್ನವೇ ದೃಶ್ಯಮಾಧ್ಯಮದವರಿಗೆ ಸುಳಿವು ಲಭ್ಯವಾಗಿ ಒಬ್ಬೊಬ್ಬರಾಗಿ ಸ್ಥಳದಿಂದ ನಿರ್ಗಮಿಸಿದರು. ಕಾರ್ಯಕ್ರಮ ರದ್ಧತಿ ಅಧಿಕವಾಗಿ ಅಭ್ಯರ್ಥಿ ಬೋಪಯ್ಯ ಅವರ ಆತಂಕಕ್ಕೆ ಕಾರಣವಾಗಿದ್ದರೂ ಸಂಸದ ಪ್ರತಾಪ್‍ಸಿಂಹ ಮತ್ತು ಹಲವು ನಾಯಕರು ಕ್ಷಣಕಾಲ ಬೋಪಯ್ಯ ಪರ ಪ್ರಚಾರ ಭಾಷಣ ಮಾಡಿದರು.
(ಮೊದಲ ಪುಟದಿಂದ) ಯೋಗಿ ಆದಿತ್ಯನಾಥ್ ರದ್ಧಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಸದಾ ಸಭೆಯಲ್ಲಿ ನಿದ್ರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಅಂತ್ಯವಾಗಲಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಆಯ್ಕೆ ನಿಶ್ಚಿತ. ಬೋಪಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಮಾನ ಸಿಗಲಿದೆ ಎಂದರು.
ಕೊಡಗಿನ ಶಾಂತಿಪ್ರಿಯ ಜಿಲ್ಲೆಯಲ್ಲಿ ಅಶಾಂತಿ ನೆಲೆಸಲು ಕಾಂಗ್ರೆಸ್ ಕಾರಣ. ಕೇರಳ ಮೂಲದ ಕೆಲವರು ಕೊಡಗಿನ ಕಾಫಿ ಮೆಣಸು ಖರೀದಿ ನೆಪದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ ಅವರು ಇದೀಗ ಕೊಡವ-ಗೌಡ ಎಂಬ ಜಾತಿ ರಾಜಕೀಯ ಬೇರೆ ಹುಟ್ಟುಹಾಕಿರುವದು ಆತಂಕಕಾರಿ ಎಂದರು. ಈ ಬಾರಿ ಕಪ್ ನಮ್ಮದಲ್ಲ ಕರ್ನಾಟಕವೇ ನಮ್ಮದು. ಚುನಾವಣೆ ಯಲ್ಲಿ ಜೆಡಿಎಸ್‍ಗೆ ಸಮಾಧಾನಕರ ಬಹುಮಾನ ಮಾತ್ರಾ ಎಂದರು.
ರಾಜಸ್ಥಾನದ ಕ್ರೀಡಾಪ್ರಾಧಿಕಾರ ಮಾಜಿ ಅಧ್ಯಕ್ಷ ಧರ್ಮನಾರಾಯಣ ಜೋಷಿ ಮಾತನಾಡಿ, ರಾಹುಲ್ ಗಾಂಧಿಗೆ ವಿಶ್ವೇಶ್ವರಯ್ಯ ಹೆಸರನ್ನು ಹೇಳಲು ಬರುವದಿಲ್ಲ. ಇಂತವರಿಂದ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ದೇಶ ವಿಭಜನೆ ಮಾಡಿರುವದು ಕಾಂಗ್ರೆಸ್ ಪಕ್ಷ. ಮುಂದೆ ಉತ್ತರ-ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ಪೆÇನ್ನಂಪೇಟೆ ತಾಲೂಕು ರಚನೆ ಬೇಡಿಕೆ ಶೀಘ್ರ ಈಡೇರಿಸಲಾಗುವದು. ಅಧಿಕಾರಕ್ಕೆ ಬಂದ 24 ಗಂಟೆ ಅವಧಿಯಲ್ಲಿ ಕೃಷಿಕರ ರೂ.1 ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುವದು. ಸಿದ್ದರಾಮಯ್ಯ ಅಧಿಕಾರ ಇಳಿಸುವದು ಹಾಗೂ ಕಾಂಗ್ರೆಸ್ ಮುಕ್ತ ರಾಜ್ಯ ಮಾಡುವದು ನಮ್ಮ ಗುರಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಅಭಿವೃದ್ಧಿಯಲ್ಲಿ ಇಡೀ ವಿಶ್ವದಲ್ಲಿಯೇ 3 ನೇ ಸ್ಥಾನದಲ್ಲಿದೆ. ಟಿಪ್ಪು ಜಯಂತಿ ಆಚರಣೆ ಹೆಸರಿನಲ್ಲಿ ಕೊಡಗಿನಲ್ಲಿ ಸಿದ್ದರಾಮಯ್ಯ ಅಶಾಂತಿ ಹಾಗೂ ಸಾವು ನೋವಿಗೆ ಕಾರಣರಾದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಮೊದಲಿಗೆ ಟಿಪ್ಪುಜಯಂತಿ ಆಚರಣೆ ರದ್ದು ಮಾಡುವದಾಗಿ ಹೇಳಿದರು.
ಸಭೆಯಲ್ಲಿ ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಬೋಸ್‍ದೇವಯ್ಯ, ಕರ್ನಾಟಕ ಬಿಜೆಪಿ ಪಕ್ಷದ ಕಾರ್ಯದರ್ಶಿ ಮನು ಮುತ್ತಪ್ಪ, ಕೊಡಗು ಬಿಜೆಪಿ ಅಧ್ಯಕ್ಷ ಭಾರತೀಶ್ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಬಿಜೆಪಿ ಪ್ರಮುಖರಾದ ಸುಜಾಕುಶಾಲಪ್ಪ, ವೀರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್‍ಭೀಮಯ್ಯ, ರೀನಾ ಪ್ರಕಾಶ್, ರಾಜ್ಯ ಕಾರ್ಯದರ್ಶಿ ರಂಜಿತ್, ರಾಬಿನ್ ದೇವಯ್ಯ, ತಳೂರು ಕಿಶೋರ್‍ಕುಮಾರ್, ಕೊಡಂದೇರ ಬಾಂಡ್ ಗಣಪತಿ, ತಾ.ಪಂ. ಅಧ್ಯಕ್ಷೆ ಸ್ಮಿತಾಪ್ರಕಾಶ್, ಕಾಂತಿ ಸತೀಶ್, ಜಿ.ಪಂ. ಸದಸ್ಯರಾದ ಸಿ.ಕೆ. ಬೋಪಣ್ಣ, ಅಪ್ಪಂಡೇರಂಡ ಭವ್ಯ, ಇ.ಸಿ. ಜೀವನ್. ನೆಲ್ಲೀರ ಚಲನ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಟಿ.ಎಲ್. ಶ್ರೀನಿವಾಸ್