ಗೋಣಿಕೊಪ್ಪಲು, ಮೇ 8: ಬೆಳೆಗಾರರ ಮನವಿಗಳಿಗೆ ಸ್ಪಂದಿಸುವ ಅಭ್ಯರ್ಥಿಗಳಿಗೆ ಬೆಂಬಲಿಸುವದಾಗಿ ಬೆಳೆಗಾರರ ಸಂಘ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಇಂದು ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಅವರುಗಳು ಬೆಳೆಗಾರರ ಸಂಘದ ಕಚೇರಿಗೆ ತೆರಳಿ ಬೆಳೆಗಾರರ ಮನವಿ ಸ್ವೀಕರಿಸಿ, ಮನವಿಗೆ ಸ್ಪಂದಿಸಿದ್ದಾರೆ. ತಾ. 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೊಡಗು ಜಿಲ್ಲಾ ರೈತ ಸಂಘ ಪಕ್ಷದ ಅಭ್ಯರ್ಥಿಗಳಿಗೆ ಬಹಿರಂಗ ಆಹ್ವಾನ ನೀಡಿತ್ತು. ಅದರಂತೆ ಇಂದು ಬೆಳಿಗ್ಗೆ 10.30ರಿಂದ ವಿವಿಧ ಪಕ್ಷದ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಗೋಣಿಕೊಪ್ಪ ಕಚೇರಿಗೆ ಆಗಮಿಸಿ ರೈತರ ಅಹವಾಲು ಸ್ವೀಕರಿಸಿದರು.

ಗೋಣಿಕೊಪ್ಪಲಿನ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕೊಡಗಿನ ವಿವಿಧ ಭಾಗದ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ಚುನಾವಣೆಯಲ್ಲಿ ಆರಿಸಿ ಬರುವ ಅಭ್ಯರ್ಥಿಗಳು ರೈತರ ಬೇಡಿಕೆಗಳನ್ನು

(ಮೊದಲ ಪುಟದಿಂದ) ಈಡೇರಿಸಿದಲ್ಲಿ ರೈತ ಸಂಘದ ವತಿಯಿಂದ ಅಂತಹ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಬಗ್ಗೆ ತಿರ್ಮಾನ ಕೈಗೊಳ್ಳಲಾಗುವದೆಂದು ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಮೊದಲಿಗೆ ಆಗಮಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಸಂಕೇತ್ ಪೂವಯ್ಯ ರೈತರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ರೈತರ ಸಮಸ್ಯೆಗಳನ್ನು ಬಗೆಹರಿಸುವದು ಪಕ್ಷಗಳ ಜವಾಬ್ದಾರಿ ಅಧಿಕಾರಕ್ಕೆ ಬಂದ ನಂತರ ಈ ಭಾಗದ ರೈತರ ಸಮಸೈಗಳನ್ನು ಆದ್ಯತೆ ಮೇಲೆ ಈಡೇರಿಸುವದಾಗಿ ಭರವಸೆ ನೀಡಿದರು. ರೈತ ಸಂಘದೊಂದಿಗೆ ಹಲವಾರು ವರ್ಷಗಳಿಂದ ಹೋರಾಟದಲ್ಲಿ ಭಾಗಿ ಆಗಿರುವ ತನಗೆ ರೈತರ ಸಂಕಷ್ಟದ ಅರಿವಿದೆ. ಈ ಬಾರಿ ರೈತರ ಮಗನಾಗಿ ಈ ಭಾಗದಿಂದ ಆರಿಸಿ ಕಳುಹಿಸಿ ಕೊಡುವಂತೆ ಮನವಿ ಮಾಡಿದರು. ಈ ಸಂದರ್ಭ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಚಿಮ್ಮಂಗಡ ಗಣೇಶ್, ಮುಖಂಡರುಗಳಾದ ಅಜ್ಜಮಾಡ ಶಂಕ್ರು ನಾಚಪ್ಪ, ಸೋಮೆಯಂಗಡ ಹ್ಯಾರಿ ಸೋಮೇಶ್, ಆದೆಂಗಡ ಅಶೋಕ್ ಮುಂತಾದವರು ಹಾಜರಿದ್ದರು.

ಗೋಣಿಕೊಪ್ಪ ವರದಿ : ಜಿಲ್ಲಾ ರೈತ ಸಂಘದ ಕಚೇರಿಗೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಭೇಟಿ ನೀಡಿ ಸಭೆ ನಡೆಸಿ ಮತಯಾಚನೆ ಮಾಡಿದರು.

ಈ ಸಂದರ್ಭ ರೈತ ಸಂಘದ ವತಿಯಿಂದ ಅಭ್ಯರ್ಥಿಗೆ ಮನವಿ ಸಲ್ಲಿಸುವ ಮೂಲಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಅರುಣ್ ಮಾಚಯ್ಯ ಮಾತನಾಡಿ, ಬಿಜೆಪಿ ಸರ್ಕಾರದಿಂದ ರೈತ ಸಂಘಕ್ಕೆ ಸ್ಪಂದನ ದೊರೆತಿಲ್ಲ. ನಮ್ಮ ಸರ್ಕಾರ ರೈತ ಸಂಘದ ಪರವಾಗಿ ಆಡಳಿತ ನಡೆಸಲಿದೆ ಎಂದರು.

ಈ ಸಂದರ್ಭ ರೈತ ಸಂಘ ಅಧ್ಯಕ್ಷ ಮನು ಸೋಮಯ್ಯ, ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಚಿಮ್ಮಂಗಡ ಗಣೇಶ್ ಹಾಗೂ ಸದಸ್ಯರು ಹಾಜರಿದ್ದರು.