ಸೋಮವಾರಪೇಟೆ, ಮೇ 8: ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕ ಸದೃಢತೆ ಹೊಂದಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ. ಇಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಡಾ. ಬಿ.ಸಿ. ಚಿಟ್ಟಿಯಪ್ಪ ಹೇಳಿದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಬಾಲ ಭವನ ಸಮಿತಿ ಆಶ್ರಯದಲ್ಲಿ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಓದಿನತ್ತ ಮಾತ್ರ ಗಮನ ಹರಿಸಿದರೆ ಸಾಲದು. ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್. ಮಹೇಶ್ ಮಾತನಾಡಿ, ಕೆಲವು ಮಕ್ಕಳಿಗೆ ಖಾಸಗಿ ಶಿಬಿರಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವದಿಲ್ಲ. ಪ್ರತಿಭೆ ಇದ್ದರೂ ಅವಕಾಶ ವಂಚಿತರಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ, ಸೃಜನಶೀಲತೆಯನ್ನು ಹೊರತರಲು ಇಲಾಖೆಯು ಉಚಿತವಾಗಿ ಬೇಸಿಗೆ ಶಿಬಿರವನ್ನು ನಡೆಸುತ್ತಿದೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಶಿಕ್ಷಣ ಇಲಾಖೆಯ ಸಂಯೋಜಕರಾದ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಶಂಕರಯ್ಯ, ಇಲಾಖೆ ಮೇಲ್ವಿಚಾರಕಿ ಶಿಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.